ಮಂಡ್ಯ ನಗರದ ಕಲ್ಲಹಳ್ಳಿಯ ರೈಲ್ವೆಗೇಟ್ ಸಮೀಪ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು. 
ಮಂಡ್ಯ

ಪ್ರತ್ಯೇಕ ಜಿಲ್ಲಾಸ್ಪತ್ರೆ ಸ್ಥಾಪನೆಗೆ ಪ್ರಸ್ತಾವನೆ: ಶಾಸಕ ರವಿಕುಮಾರ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ
  • ಒಂದು ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ
ಮಂಡ್ಯ: ನಗರದಲ್ಲಿ ಹೊಸ ಜಿಲ್ಲಾಸ್ಪತ್ರೆ ಸ್ಥಾಪನೆಗೆ ಪ್ರಸ್ತುತ ಬಜೆಟ್‌ನಲ್ಲಿ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಕಲ್ಲಹಳ್ಳಿಯ ರೈಲ್ವೆಗೇಟ್ ಸಮೀಪ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಶಂಕರನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಜಿಲ್ಲಾಸ್ಪತ್ರೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಅಧೀನದಲ್ಲಿದೆ. ಮಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ 2 ರಿಂದ 3 ಸಾವಿರ ರೋಗಿಗಳು ಬರುತ್ತಿದ್ದಾರೆ. ಜತೆಗೆ ಚಿಕಿತ್ಸೆ ನೀಡುವುದಕ್ಕೂ ವೈದ್ಯರಿಗೆ ಒತ್ತಡವಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ವೈದ್ಯರು ಮತ್ತು ರೋಗಿಗಳಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಮತ್ತು ಬೆಡ್‌ಗಳ ಕೊರತೆ ನೀಗಿಸಲು ಇನ್ನೊಂದು 500 ಹಾಸಿಗೆಯುಳ್ಳ ಜಿಲ್ಲಾಸ್ಪತ್ರೆ ನಿರ್ಮಾಣ ಆಗಬೇಕು. ಈ ಸಂಬಂಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸ್ಥಳೀಯರ ಅವಶ್ಯಕತೆಗೆ ಅನುಗುಣವಾಗಿ 1 ಕೋಟಿ ರೂ ವೆಚ್ಚದಲ್ಲಿ ಶಂಕರನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಅತ್ಯುತ್ತಮವಾದ ಎರಡು ಅಂತಸ್ಥಿನ ಆಸ್ಪತ್ರೆ ಲೋಕಾರ್ಪಣೆ ಮಾಡುತ್ತೇವೆ. ಗುತ್ತಲು ಬಡಾವಣೆಯಲ್ಲಿರುವ ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಅಲ್ಲಿಗೆ ಸ್ವಂತ ಕಟ್ಟಡ ಬೇಕೆಂದು ಸಾರ್ವಜನಿಕರು ಕೇಳಿದ್ದಾರೆ. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ಮುಂದೆ ಅದಕ್ಕೂ ಭೂಮಿ ಪೂಜೆ ಮಾಡುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಸದಸ್ಯ ಎಂ.ಕೃಷ್ಣ, ನಗರಸಭಾ ಸದಸ್ಯರಾದ ನಯೀಂ, ಪೂರ್ಣಿಮಾ, ಮಂಗಳಾ, ಜಾಕೀರ್ ಪಾಷಾ, ಮಾಜಿ ಸದಸ್ಯ ರವೀಂದ್ರ, ಮುಖಂಡರಾದ ಕಲ್ಲಹಳ್ಳಿ ಆನಂದ್, ಅನೂಪ್, ಮಂಜುನಾಥ್, ಗುತ್ತಿಗೆದಾರ ಚೇತನ್‌ಗೌಡ ಇತರರಿದ್ದರು.