ಕುಂದಾಪುರ ತಾಲೂಕಿನ ಸೇನಾಪುರ ರೈಲು ನಿಲ್ದಾಣ.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಕುಂದಾಪುರ ತಾಲೂಕಿನ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹಿಸಿ ನಡೆದ ಸುದೀರ್ಘ ಹೋರಾಟಕ್ಕೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಎರಡು ಪ್ಯಾಸೆಂಜರ್ ರೈಲುಗಳ ನಿಲುಗಡೆ ಹೊರತುಪಡಿಸಿ ಬೇರ‌್ಯಾವ ರೈಲುಗಳ ನಿಲುಗಡೆ ಇಲ್ಲಿಲ್ಲ. ನಿಲ್ದಾಣ ಸಂಪರ್ಕಿಸುವ ರಸ್ತೆಯೂ ಅಭಿವೃದ್ಧಿ ಕಂಡಿಲ್ಲ. ಪ್ರಸ್ತುತ ರೈಲು ನಿಲ್ದಾಣ ಬಿಕೋ ಎನ್ನುತ್ತಿದೆ.
ನಿರ್ಲಕ್ಷೃಕ್ಕೆ ಒಳಗಾಗಿರುವ ಸೇನಾಪುರ ರೈಲು ನಿಲ್ದಾಣಕ್ಕೆ ಮರು ಜೀವ ನೀಡಬೇಕು. ಪ್ರಮುಖ ರೈಲುಗಳ ನಿಲುಗಡೆ ನೀಡಬೇಕೆಂದು ಕಳೆದ ಮೂರು ವರ್ಷಗಳ ಹಿಂದೆ ಜನಾಂದೋಲನ ನಡೆದಿತ್ತು. ಹೋರಾಟಕ್ಕೆ ಮಣಿದ ಶಾಸಕರು, ಸಂಸದರು ಬೇಡಿಕೆ ಈಡೇರಿಕೆ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ.
ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಮೂರು ಟ್ರಾೃಕ್‌ಗಳಿದ್ದರೂ ಪ್ರಮುಖ ರೈಲುಗಳ ನಿಲುಗಡೆಯಿಲ್ಲ. ಈ ಭಾಗದ ಜನರು ಉದ್ಯೋಗ, ಶಿಕ್ಷಣ ನಿಮಿತ್ತ ಬೆಂಗಳೂರು ಸೇರಿದಂತೆ ಮುಂಬೈ, ಗೋವಾ, ಕೇರಳ ರಾಜ್ಯದಲ್ಲಿ ನೆಲೆಸಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಗಂಗೊಳ್ಳಿ ಮೀನುಗಾರಿಕಾ ಕಿರು ಬಂದರು ನಿಲ್ದಾಣಕ್ಕೆ ನಿಕಟವಾಗಿದೆ. ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಇಲ್ಲದೆ ಇರುವುದರಿಂದ ಈ ಭಾಗದ ಜನರು ರೈಲು ಸೇವೆಯಿಂದ ವಂಚಿತರಾಗಿದ್ದಾರೆ. ಪ್ರಮುಖ ರೈಲುಗಳ ನಿಲುಗಡೆ ಬೇಡಿಕೆ ಈಡೇರಿಸದಿರುವುದು ಗ್ರಾಮಸ್ಥ ಆಕ್ರೋಶಕ್ಕೆ ಕಾರಣವಾಗಿದೆ.
ಈ ಭಾಗದ ಹೆಚ್ಚಿನವರು ಮುಂಬೈ, ಮಹಾರಾಷ್ಟ್ರ, ಗುಜರಾತ್, ಹೊರ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಊರಿಗೆ ಬರುವಾಗ 20 ಕಿ.ಮೀ. ದೂರದ ಕುಂದಾಪುರ ಅಥವಾ 25 ಕಿ.ಮೀ. ದೂರದ ಬೈಂದೂರಿನಲ್ಲಿಳಿದು ಆಟೋ, ಟ್ಯಾಕ್ಸಿ ವಾಡಿಕೊಂಡು ಬರಬೇಕು. ಬಸ್‌ನಲ್ಲಿ ತೆರಳೋಣವೆಂದರೆ ಬಸ್ ವ್ಯವಸ್ಥೆಯೂ ಇಲ್ಲ. ಅತಿ ಹತ್ತಿರದಲ್ಲಿ ರೈಲ್ವೆ ನಿಲ್ದಾಣವಿದ್ದರೂ ಪ್ರಯೋಜವಿಲ್ಲದಂತಾಗಿದೆ. ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ಸಹಿತ ಪ್ರಮುಖ ರೈಲಿಗೆ ನಿಲುಗಡೆ ನೀಡಬೇಕು ಎಂದು ಕಳೆದ 3 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಮನ್ನಣೆ ಸಿಕ್ಕಿಲ್ಲ.
ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸಂಬಂಧಿಸಿದಂತೆ ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ವಾಡಿ ಮನವಿ ವಾಡಲಾಗಿದೆ. ಮುಂಬೈ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಈ ಭಾಗದ ಜನರಿಗೆ ಹತ್ತಿರವಾಗಿರುವ ಸೇನಾಪುರ ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಪ್ರಯತ್ನ ಮುಂದುವರಿಸಲಾಗುವುದು.