ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು.  
ಮಂಡ್ಯ

ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತಾಗಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ನಗರದ ಗಾಂಧಿಭವನದಲ್ಲಿ ವಿಚಾರ ಸಂಕಿರಣ
  • ಕನ್ನಡ ಸೇನೆ ಜಿಲ್ಲಾ ಘಟಕದಿಂದ ಆಯೋಜನೆ
ಮಂಡ್ಯ: ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣದ ಪ್ರಭಾವದಿಂದ ಹಲವಾರು ಬಿಕ್ಕಟ್ಟು ಸೃಷ್ಟಿಯಾಗಿವೆ. ಈ ಮೂರು ಕ್ಷೇತ್ರಗಳು ಕುಸಿತವಾದರೆ ದೇಶದ ಪ್ರಗತಿಯೂ ಕುಂಠಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನರ ಅಭಿವೃದ್ಧಿಯಾದರೆ ಮಾತ್ರ ದೇಶ ಪ್ರಗತಿ ಪಥದಲ್ಲಿ ಸಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಇಂದಿನ ಶಿಕ್ಷಣದಲ್ಲಿ ದೇಶದ ಪ್ರಗತಿಯ ಚಿಂತನೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, 1 ರಿಂದ 6ನೇ ತರಗತಿವರೆಗೆ ಎಲ್ಲ ಮಕ್ಕಳಿಗೆ ಮಾತೃಭಾಷೆ ಶಿಕ್ಷಣ ಸಿಗಬೇಕು. ಆದರೆ ಮಾರುಕಟ್ಟೆ ಕೇಂದ್ರಿತವಾಗಿ ಮಕ್ಕಳನ್ನು ಅಣಿಗೊಳಿಸುತ್ತಿರುವುದರಿಂದ ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾಗತೀಕರಣದ ಪ್ರಭಾವದಿಂದ ಆಂಗ್ಲ ಭಾಷೆಯನ್ನು ತೊರೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯಭಾಷೆಯನ್ನು ಒಂದು ಅಥವಾ ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು. ಆದರೆ, ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ. ಇದು 2015ರ ಕನ್ನಡ ಭಾಷಾ ಕಲಿಕಾ ಕಾಯ್ದೆಯ ಉಲ್ಲಂಘನೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಮುಖ್ಯಮಂತ್ರಿಗೆ ನಾನು ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
3ನೇ ಭಾಷೆಯಾಗಿ ಹಿಂದಿಯನ್ನು ಕಲಿಯುವುದರಿಂದ ಸಿಗುವ ಪ್ರಯೋಜನವೇನು?. ಪ್ರಯೋಜನವಿಲ್ಲದಿದ್ದರೂ ರಾಜ್ಯದ 7 ಲಕ್ಷ ವಿದ್ಯಾರ್ಥಿಗಳಿಗೆ ಹಿಂದಿ ಕಲಿಯಬೇಕು ಎಂದು ಒತ್ತಡ ಹಾಕುತ್ತಿರುವುದು ಏಕೆ?. ರಾಜ್ಯದಲ್ಲಿ 290 ಭಾಷೆಗಳಿವೆ. ಇದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಜನ ಮಾತನಾಡುವ ಭಾಷೆಗಳು 27. ಈ ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯನ್ನು ಕಲಿಯುವ ಅವಕಾಶ ಕಲ್ಪಿಸಬೇಕಿದೆ. 300 ಶಾಲೆಗಳನ್ನು ಅಧ್ಯಯನ ಮಾಡಿದಾಗ, ನಲಿಕಲಿ ಯೋಜನೆ ಸಂಪೂರ್ಣ ವಿಫಲವಾಗಿರುವುದು ಗೊತ್ತಾಯಿತು. ಏಕೆಂದರೆ 1ರಿಂದ 3ನೇ ತರಗತಿವರೆಗೆ ಮಕ್ಕಳು ನಲಿದರೇ ವಿನಾ ಕಲಿಯಲಿಲ್ಲ. ಇದರ ಪರಿಣಾಮ 4ನೇ ತರಗತಿಯ ವಿದ್ಯಾರ್ಥಿ ಸರಿಯಾಗಿ ಅಕ್ಷರ ಗುರುತಿಸುತ್ತಿಲ್ಲ, ಹೆಸರನ್ನು ಬರೆಯಲು ಬರುತ್ತಿಲ್ಲ. ಮಾತೃಭಾಷೆಯಲ್ಲಿ ಉತ್ತಮ ಬೋಧನಾ ವಿಧಾನದೊಂದಿಗೆ ಮಕ್ಕಳಿಗೆ ಕಲಿಸಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಶಾಲೆಗಳ ಬಗ್ಗೆ ಮಕ್ಕಳಿಗೆ ಇರುವ ಭಯ, ಆತಂಕವನ್ನು ನಿವಾರಿಸಿ, ಮನೆಯ ವಾತಾವರಣ ಕಲ್ಪಿಸಬೇಕು. ಕಲಿಕೆ ಎಂಬುದು ಸಂಭ್ರಮವಾಗಬೇಕು. ಶಿಕ್ಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಲವಲವಿಕೆಯಿಂದ ಪಾಠ ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಸಾಕ್ಷರತೆ ಪ್ರಮಾಣ ದೇಶದಲ್ಲಿ 1901ರಲ್ಲಿ ಶೇ.6, 1951ರಲ್ಲಿ ಶೇ.16 ಮತ್ತು 2025ರಲ್ಲಿ ಶೇ.76ಕ್ಕೆ ಏರಿಕೆಯಾಗಿದೆ. 2047ರ ಹೊತ್ತಿಗೆ ಶೇ 100ರಷ್ಟು ಸಾಕ್ಷರತೆ ಸಾಧಿಸುತ್ತೇವೆ. ವಿಕಸಿತ ಭಾರತದ ಕನಸು ನನಸಾಗುತ್ತದೆ ಎಂದರು.
ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಎನ್.ಮುನಿರಾಜೇಗೌಡ, ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಇತರರಿದ್ದರು.