ಮಂಡ್ಯ ತಾಲೂಕು ಬಸರಾಳು ಗ್ರಾಮದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. 
ಮಂಡ್ಯ

292 ಬಡವರಿಗೆ ನಿವೇಶನ ಹಂಚಿಕೆ: ಎರಡು ಗ್ರಾಮಸಭೆಯಲ್ಲಿ ಅನುಮೋದನೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವ
  • ಹುಲಿವಾನ ಮತ್ತು ಬಸರಾಳು ಗ್ರಾಮ ಪಂಚಾಯಿತಿಯಿಂದ ಆಯೋಜನೆ
ಮಂಡ್ಯ: ತಾಲೂಕಿನ ಹುಲಿವಾನ ಮತ್ತು ಬಸರಾಳು ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಗ್ರಾಮಸಭೆಯಲ್ಲಿ 292 ಬಡವರಿಗೆ ನಿವೇಶನ ನೀಡಲು ಅನುಮೋದನೆ ನೀಡಲಾಯಿತು. ಇದರೊಂದಿಗೆ ಫಲಾನುಭವಿಗಳ ಹಲವು ವರ್ಷದ ಕನಸು ನನಸಾಯಿತು.
ಬಡವರಿಗೆ ನಿವೇಶನ ಹಂಚಿಕೆ ಮಾಡುವ ಸಂಬಂಧ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಪ್ರತ್ಯೇಕ ಸಭೆ ಆಯೋಜಿಸಲಾಗಿತ್ತು. ಬೆಳಗ್ಗೆ ಹುಲಿವಾನ ಗ್ರಾಮದಲ್ಲಿ ನಡೆದ ಸಭೆಯಲ್ಲಿ 250 ಬಡವರಿಗೆ ನಿವೇಶನ ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಯಿತು. ಗ್ರಾಮ ಮಟ್ಟದಲ್ಲಿ ಇದೊಂದು ಐತಿಹಾಸಿಕ ತೀರ್ಮಾನವಾಯಿತು. ನಿರ್ದಿಷ್ಟ ನೆಲೆಯಿಲ್ಲದೆ ಬಾಡಿಗೆ ಮನೆಯಲ್ಲಿ ಬದುಕು ನಡೆಸುತ್ತಿದ್ದ 250 ಕುಟುಂಬಕ್ಕೆ ದೊಡ್ಡ ಉಡುಗೊರೆ ಸಿಕ್ಕಂತಾಯಿತು.
ಇನ್ನು ಮಧ್ಯಾಹ್ನ ಬಸರಾಳು ಗ್ರಾಮದಲ್ಲಿಯೂ ನಿವೇಶನ ಹಂಚಿಕೆ ಸಂಬಂಧ ಸಭೆ ಆಯೋಜಿಸಲಾಗಿತ್ತು. ಇಲ್ಲಿಯೂ ಅರ್ಹರ ಆಯ್ಕೆ ಮಾಡಲು ಪಾರದರ್ಶಕತೆಗೆ ಒತ್ತು ನೀಡಲಾಯಿತು. ಅದರಂತೆ ಲಾಟರಿ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಬಸರಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ 36 ಜನ ಬಡ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲು ಒಪ್ಪಿಗೆ ಸಿಕ್ಕಿತು.

ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕತೆ
ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ಅರ್ಹ ಫಲಾನುಭವಿಗೆ ಸೌಲಭ್ಯ ಸಿಗಬೇಕು. ಈ ವಿಚಾರದಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಜತೆಗೆ ಯಾರ ಶಿಫಾರಸು ಕೆಲಸ ಮಾಡಬಾರದು. ನ್ಯಾಯ ಎಲ್ಲರಿಗೂ ಸಮಾನ. ಇದು ನಮ್ಮ ಧೈಯ. ಅದರಂತೆ ಪಾರದರ್ಶಕವಾಗಿಯೇ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದರು.
ಗ್ರಾಮಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮುಂದಿನ ಹಂತ ಅಂದರೆ ವಸತಿ ಯೋಜನೆಗೆ ಕಳುಹಿಸಿಕೊಡಲಾಗುವುದು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಐದು ಸಾವಿರ ಬಡವರಿಗೆ ನಿವೇಶನ ಹಂಚಿಕೆ ಮಾಡುವ ಗುರಿ ಇದೆ. ಈಗಾಗಲೇ 250ಕ್ಕೂ ಹೆಚ್ಚು ಜನರಿಗೆ ನಿವೇಶನ ನೀಡಲಾಗಿದೆ. ಇದಷ್ಟೇ ಅಲ್ಲದೆ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ ಬಡವರಿಗೆ ನಿವೇಶನ ಕೊಡುವ ಕೆಲಸ ಮೂರು ತಿಂಗಳೊಳಗೆ ಮಾಡಲಾಗುವುದು ಎಂದು ಹೇಳಿದರು.
ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಾಲೂಕು ಪಂಚಾಯಿತಿ ಇಒ ಲೋಕೇಶ್ ಇತರರಿದ್ದರು.