ಹುಸ್ಕೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಜಿ.ಮಾದೇಗೌಡ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಿತೇಶ್ ಮಾತನಾಡಿದರು.
* ವೈದ್ಯ ಡಾ.ಜಿತೇಶ್ ಸಲಹೆ * ಆರೋಗ್ಯ ಉಚಿತ ತಪಾಸಣೆ ಶಿಬಿರ
ಹಲಗೂರು: ಸಮೀಪದ ಹುಸ್ಕೂರು ಮತ್ತು ಅಂತರವಳ್ಳಿ ಗ್ರಾಮದಲ್ಲಿ ಮಂಗಳವಾರ ಭಾರತಿ ನಗರ ಧರ್ಮಸ್ಥಳ ಯೋಜನಾ ಕಚೇರಿ ವತಿಯಿಂದ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತಿ ನಗರದ ಜಿ.ಮಾದೇಗೌಡ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಜಿತೇಶ್ ಮತ್ತು ಸಿಬ್ಬಂದಿ ಸುಮಾರು 300ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಬಿ.ಪಿ, ಇ.ಸಿ.ಜಿ, ಮಧುಮೇಹ ತಪಾಸಣೆ ನಡೆಸಿದರು.
ವೈದ್ಯ ಡಾ.ಜಿತೇಶ್ ಮಾತನಾಡಿ, ಆರೋಗ್ಯದ ಬಗ್ಗೆ ನಿರ್ಲಕ್ಷೃ ಇರಬಾರದು. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ತಕ್ಷಣ ವೈದ್ಯರ ಹತ್ತಿರ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಅವರು ನೀಡುವ ಸೂಚನೆ ಹಾಗೂ ಸಲಹೆಗಳನ್ನು ಪಾಲಿಸಬೇಕು. ಧರ್ಮಸ್ಥಳ ಸಂಘದ ವತಿಯಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದ ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಭಾರತಿನಗರ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಸುವರ್ಣಾ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೂಜ್ಯರ ಆಶಯದಂತೆ ಗ್ರಾಮೀಣ ಭಾಗದಲ್ಲಿ ಜನರು ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಲು ಸಕಾಲದಲ್ಲಿ ವ್ಯವಸ್ಥೆಗಳು ಇಲ್ಲ. ಕೆಲವು ಅನಾರೋಗ್ಯ ಕಾಡಿದಾಗ ಆಸ್ಪತ್ರೆಗೆ ತೋರಿಸದೆ ನಿರ್ಲಕ್ಷ್ಯ ವಹಿಸುತ್ತಾರೆ. ಸಮಯಕ್ಕೆ ಸರಿಯಾಗಿ ವೈದ್ಯರ ಭೇಟಿ ಸಿಗದೆ ಇರುವ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ವೈದ್ಯರ ತಂಡವನ್ನೇ ಕರೆಸಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸುತ್ತಾ ಬಂದಿದ್ದು, ಪ್ರತಿವರ್ಷ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜನೆ ಮಾಡಿ ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯೆ ಧರಣಿ, ಗ್ರಾಮದ ಮುಖಂಡರು, ಜಿ.ಮಾದೇಗೌಡ ಆಸ್ಪತ್ರೆಯ ಸಿಬ್ಬಂದಿ ಸೇರದಂತೆ ಇತರರು ಇದ್ದರು.