ಲಿಂಗಪಟ್ಟಣ ಗ್ರಾಮದ ಮಾದೇಗೌಡರ ಪುತ್ರ ಎಲ್.ಎಂ.ರವಿ ಅವರ ಆಸ್ಪತ್ರೆ ವೆಚ್ಚಕ್ಕಾಗಿ ಲಯನ್ಸ್ ಸಂಸ್ಥೆ ವತಿಯಿಂದ ಚೆಕ್ ನೀಡಲಾಯಿತು.
- ಮಂಡ್ಯ ಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್
- ಲಯನ್ಸ್ ಕ್ಲಬ್ ಆವರಣ
ಹಲಗೂರು: ಇಲ್ಲಿನ ಲಯನ್ಸ್ ಸಂಸ್ಥೆಗೆ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ದೊರೆತಿರುವುದು ಉತ್ತಮ ಬೆಳವಣಿಗೆ ಎಂದು ಮಂಡ್ಯ ಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ಲಯನ್ಸ್ ಕ್ಲಬ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 44 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಿರಿಯ ಸಂಸ್ಥೆ ಇದಾಗಿದೆ. ನಗರ ಪ್ರದೇಶದ ಸಂಸ್ಥೆಗಳಿಗೆ ಪೈಪೋಟಿ ನೀಡುವ ಮೂಲಕ ಆಡಳಿತ ಹಾಗೂ ಸೇವೆಯಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರಾಮೀಣ ಪ್ರದೇಶದ ಸಂಸ್ಥೆ ಇದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್.ಮನೋಹರ್, ಕ್ಲಬ್ ವತಿಯಿಂದ ಗ್ರಾಮೀಣ ಜನರ ಅನುಕೂಲಕ್ಕಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈವರೆಗೆ 616 ದಿನ ಹಸಿವು ನಿವಾರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 30ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದ್ದು, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಕ್ಲಬ್ ನೆರವಾಗಿದೆ ಎಂದರು.
ಸಂಸ್ಥೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಶಿಬಿರಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಒಂದನೇ ಸ್ಥಾನ ಪಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಲಿಂಗಪಟ್ಟಣ ಗ್ರಾಮದ ನಿವಾಸಿ ಮಾದೇಗೌಡರ ಪುತ್ರ ಎಲ್.ಎಂ.ರವಿ ಅವರ ಆಸ್ಪತ್ರೆ ವೆಚ್ಚಕ್ಕಾಗಿ ಲಯನ್ಸ್ ಸಂಸ್ಥೆ ಸದಸ್ಯರು 20,000 ರೂ.ಗಳ ಚೆಕ್ ವಿತರಿಸಿದರು. ಜಿಲ್ಲಾ ಪ್ರಾಂತಪಾಲ ರಾಜಶೇಖರ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್.ವೆಂಕಟೇಶ್‌ಕುಮಾರ್, ಕೆ.ಎಸ್.ಸುನಿಲ್ ಕುಮಾರ್, ಕರಿಯಪ್ಪ, ಸಿದ್ದೇಗೌಡ, ಜಯಕುಮಾರ್, ಡಾ.ಎ.ಎಸ್.ನಾಗೇಶ್, ಡಾ.ಶಂಷುದ್ಧೀನ್, ಸುರೇಶ್, ಎ.ಎಸ್.ದೇವರಾಜು, ಕಾರ್ಯದರ್ಶಿ ಎ.ಟಿ. ಶ್ರೀನಿವಾಸ್, ಖಜಾಂಜಿ ಸಿ.ಪ್ರವೀಣ್ ಇತರರು ಇದ್ದರು.