ಮಳವಳ್ಳಿ: ತಾಲೂಕಿನ ಚನ್ನಪಿಳ್ಳೇಕೊಪ್ಪಲು ಸಮೀಪದ ಮೈಸೂರು ಮುಖ್ಯರಸ್ತೆಯಲ್ಲಿ ಬುಧವಾರ ಬೈಕ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸವಾರನೊಬ್ಬ ಮೃತಪಟ್ಟು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಗಂಗಾಮತ ಬಡಾವಣೆ ನಿವಾಸಿ ಬಿಳಿಗಿರಿ(60) ಮೃತರು. ಹಂಗ್ರಾಪುರ ಗ್ರಾಮದ ಗುರುಸ್ವಾಮಿ, ಜಯಮ್ಮ ಗಾಯಾಳುಗಳು. ಚನ್ನಪಿಳ್ಳೇಕೊಪ್ಪಲು ಬಳಿಯ ಮುಖ್ಯರಸ್ತೆ ಬದಿ ಇರುವ ಪೆಟ್ರೋಲ್ ಬಂಕ್ ಕಡೆಗೆ ಮುಂದೆ ಬರುತ್ತಿದ್ದ ಬೈಕ್ ಸವಾರ ಏಕಾಏಕಿ ತಿರುವು ಪಡೆದುಕೊಂಡ ಪರಿಣಾಮ ಹಿಂದೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಬಿಳಿಗಿರಿ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದು ರಸ್ತೆಗೆ ತಲೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ವೇಳೆ ಬೈಕ್‌ನಲ್ಲಿದ್ದವರು ಉರುಳಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಧಾವಿಸಿ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.