ಮಳವಳ್ಳಿ ತಾಲೂಕಿನ ಸಸಿಯಾಲಪುರ ಗ್ರಾಮದಲ್ಲಿ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ನಡೆಯಿತು. ಶ್ರೀನಿವಾಸ್, ಉಮಾ, ಶಾಂತರಾಜು, ಶಿವಕುಮಾರ್ ಇತರರು ಇದ್ದರು. 
ಮಂಡ್ಯ

ಸಸಿಯಾಲಪುರದಲ್ಲಿ ಶಾಲಾ ದಾಖಲಾತಿ ಆಂದೋಲನ

ಮಳವಳ್ಳಿ: ತಾಲೂಕಿನ ಸಸಿಯಾಲಪುರ ಗ್ರಾಮದಲ್ಲಿ ತಾಪಂ, ಬಂಡೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನದೊಂದಿಗೆ ದಾಖಲಾತಿ ಆಂದೋಲನ ಮಂಗಳವಾರ ನಡೆಯಿತು.
ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲೇ ಮೊದಲ ಬಾರಿಗೆ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಸರ್ಕಾರಿ ಶಾಲೆ ದಾಖಲಾತಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಲ್ಲಿನ ಸಾಕಷ್ಟು ಕೂಲಿ ಕಾರ್ಮಿಕರು ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿದ್ದೀರಿ, ಈ ರೀತಿ ಆದರೆ ಜೀವನ ಸಾಗಿಸುವುದು ಕಷ್ಟಕರವಾಗಲಿದ್ದು, ಈ ಮನೋಭಾವದಿಂದ ಹೊರಬಂದು ನುರಿತ ತರಬೇತಿ ಹೊಂದಿದ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯುವ ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮನವಿ ಮಾಡಿದರು.
ಜೂ.1ರಂದು ಶಾಲಾ ಪ್ರಾರಂಭೋತ್ಸವ ಆಗುವುದರಿಂದ ಹತ್ತಿರದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಮಾತನಾಡಿ, ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಸರ್ಕಾರಿ ಶಾಲಾ ದಾಖಲಾತಿ ಜಾಗೃತಿ ಕಾರ್ಯಕ್ರಮ ಜಿಲ್ಲೆಯಲ್ಲಿ ವಿಶಿಷ್ಟವಾಗಿದ್ದು, ಈ ಕಾರ್ಯಕ್ರಮ ಆಯೋಜನೆ ಉತ್ತಮವಾಗಿದ್ದು, ಶಿಕ್ಷಣ ಇಲಾಖೆಗೆ ನಿಮ್ಮ ಸಹಕಾರ ಅಗತ್ಯವಾಗಿದೆ ಎಂದರು.
ಅತಿಥಿ ಶಿಕ್ಷಕ ಚುಂಚಣ್ಣ ಮಾತನಾಡಿ, ಸರ್ಕಾರದ ಸೌಲಭ್ಯಗಳ ಜತೆಗೆ ಸ್ಥಳೀಯ ಶಾಸಕರು, ಸಂಘ ಸಂಸ್ಥೆಗಳ ಅನುದಾನ ಬಳಸಿಕೊಂಡು ತಾಲೂಕಿನ ಎಲ್ಲ ಶಾಲೆಗಳಿಗೆ ಸ್ಮಾರ್ಟ್ ಟಿವಿ, ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಹಾಗೂ ಚೈತನ್ಯದಾಯಕ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಅಲ್ಲದೆ ಡಿಜಿಟಲ್ ಹಾಗೂ ಕಂಪ್ಯೂಟರ್ ಶಿಕ್ಷಣ ಕೊಡಿಸಲು ಕ್ರಮ ವಹಿಸುವುದರ ಜತೆಗೆ ಮೂಲ ಸೌಕರ್ಯವನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ. ಪಾಲಕರು ಖಾಸಗಿ ಶಾಲೆ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗೆ ಸೇರಿಸುವುದರಿಂದ ಗುಣಮಟ್ಟದ ಶಿಕ್ಷಣ ದೊರೆಯಲಿದ್ದು, ಆರ್ಥಿಕ ಸಂಕಷ್ಟದಿಂದ ತಮ್ಮ ಕುಟುಂಬ ಪಾರಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶಾಂತರಾಜು, ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಹೋರಾಟಗಾರ್ತಿ ಮಹಾದೇವಮ್ಮ, ಅಂಬೇಡ್ಕರ್ ಸೈನ್ಯದ ಜಿಲ್ಲಾಧ್ಯಕ್ಷ ಸಿದ್ದರಾಜು ಇತರರು ಇದ್ದರು.