ಶ್ರೀರಂಗಪಟ್ಟಣದಲ್ಲಿ ಹನುಮದ್ ವ್ರತ ಪ್ರಯುಕ್ತ ಬುಧವಾರ ಹಿಂದು ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆಯು ಪುರಸಭೆ ವೃತ್ತದ ಜಾಮಿಯಾ ಮಸೀದಿ ಮುಂಭಾಗ ತಲುಪುತ್ತಿದ್ದಂತೆ ಪೊಲೀಸರ ಭದ್ರತೆ ನಡುವೆ ಹನುಮ ಮಾಲಾಧಾರಿಗಳು ಕೇಸರಿ ಶಾಲು ತಿರುವಿ ಕುಣಿದು ಕುಪ್ಪಳಿಸಿದರು.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ಹನುಮದ್ ವ್ರತದ ಅಂಗವಾಗಿ ಹಿಂದು ಜಾಗರಣ ವೇದಿಕೆ ಹಮ್ಮಿಕೊಂಡಿದ್ದ 11ನೇ ವರ್ಷದ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನ ಯಾತ್ರೆಯಲ್ಲಿ ಸಾವಿರಾರು ಮಾಲಾಧಾರಿಗಳು ಪಾಲ್ಗೊಂಡಿದ್ದರು. ಸಣ್ಣ ಪುಟ್ಟ ಗದ್ದಲ, ಗೊಂದಲಗಳ ನಡುವೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಯಾತ್ರೆ ಶಾಂತಿಯುತವಾಗಿ ನಡೆಯಿತು.
ಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಿ ದೇಗುಲ ಮುಂಭಾಗದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಮೈಸೂರು, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಹನುಮ ಮಾಲಾಧಾರಿಗಳು ವಿಶೇಷ ಪೂಜೆಯೊಂದಿಗೆ ಹನುಮಾನ್ ಚಾಲಿಸಾ ಪಠಣ ಹಾಗೂ ಶ್ರೀರಾಮ ನಾಮಸ್ಮರಣೆ ಮಾಡಿದರು. ಬಳಿಕ ಶ್ರೀ ಸೀತಾ ರಾಮಮೂರ್ತಿ ಸಮೇತವಿದ್ದ ಶ್ರೀ ಆಂಜನೇಯ ಸ್ವಾಮಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಡಾ.ವಿ.ಭಾನುಪ್ರಕಾಶ್ ಶರ್ಮ ಹಾಗೂ ಹಿಂದು ಜಾಗರಣ ವೇದಿಕೆಯ ಮೈಸೂರು ವಿಭಾಗದ ಮುಖ್ಯಸ್ಥ ಲೋಹಿತ್ ರಾಜೇ ಅರಸ್ ಸಮ್ಮುಖದಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಯಾತ್ರೆಗೆ ಬೆಳಗ್ಗೆ 11.50ಕ್ಕೆ ಚಾಲನೆ ನೀಡಲಾಯಿತು.
ಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಕೇಸರಿಮಯವಾಗಿತ್ತು. ಗಂಜಾಂನ ಮನೆಗಳ ಎದುರು ಮಹಿಳೆಯರು ರಂಗೋಲಿ ಬಿಡಿಸಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮಾಲಾಧಾರಿಗಳನ್ನು ಸ್ವಾಗತಿಸಿದರು. ಗಂಜಾಂನಿಂದ 5 ಕಿಮೀ ದೂರದ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಸಾಗುತ್ತಿದ್ದ ಹನುಮ ಭಕ್ತರು ಹಾಗೂ ಪೊಲೀಸರಿಗೆ ಜನರು ದಾರಿಯುದ್ದಕ್ಕೂ ಪಾನಕ, ಮಜ್ಜಿಗೆ, ನೀರು, ಹಣ್ಣು ನೀಡಿದರು.
ಹನುಮ ವೇಷಧಾರಿ ಮಕ್ಕಳು, ವೀರಭದ್ರನ ಕುಣಿತ, ತಮಟೆ-ನಗಾರಿ, ನಾದಸ್ವರ, ಮಂಗಳ ವಾದ್ಯಗಳ ನಾದಗಳೊಂದಿಗೆ ಸಾಗಿದರು. ಶಂಕರಮಠ ರಸ್ತೆ, ಭುಸಿಗೌಡನ ಚೌಕ, ಪೇಟೆ ಬೀದಿ, ರಾಮಮಂದಿರ ವೃತ್ತ, ಗೋರಿ ವೃತ್ತ, ದರಿಯಾ ದೌಲತ್ ಮಾರ್ಗವಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಕೋಟೆ ಮುಖ್ಯ ಪ್ರವೇಶ ದ್ವಾರದ ಮೂಲಕ ಶ್ರೀರಂಗಪಟ್ಟಣ ಪ್ರವೇಶಿಸಿತು. ಪಟ್ಟಣದ ಪುರಸಭೆ ವೃತ್ತದಲ್ಲಿ ಸಹಸ್ರಾರು ಮಾಲಾಧಾರಿಗಳು ಸೇರಿಸುತ್ತಿದ್ದಂತೆ ಹರ್ಷೋದ್ಗಾರ ಇಮ್ಮಡಿಗೊಂಡಿತ್ತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ನಗರಾಧ್ಯಕ್ಷ ಸುಧಾಕರ್, ಪುರಸಭೆ ಸದಸ್ಯರಾದ ಗಂಜಾಂ ಶಿವು, ಎಸ್.ಪ್ರಕಾಶ್, ವೈದಿಕ ಪ್ರಮುಖ ಕೃಷ್ಣ ಭಟ್, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಚಂದನ್, ಕಾನೂನು ವಿಭಾಗದ ಬಾಲರಾಜು, ತಾಲೂಕು ಸಂಚಾಲಕರಾದ ಹರ್ಷ, ರಾಘವೇಂದ್ರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಂಪುರ ಶ್ಯಾಮಸುಂದರ್, ಮುಖಂಡರಾದ ಪ್ರೇಮ್, ಶರತ್, ಮದನ್, ಸಾವಿರಾರು ಮಾಲಾಧಾರಿಗಳು ಪಾಲ್ಗೊಂಡಿದ್ದರು.
ಶ್ರೀರಂಗಪಟ್ಟಣ ಪ್ರವೇಶ ದ್ವಾರದಲ್ಲೇ ಸಿಗುವ ಐತಿಹಾಸಿಕ ಜಾಮಿಯಾ ಮಸೀದಿ(ಮಸ್ಜೀದ್-ಎ-ಆಲಾ) ಎದುರು ಜಮಾಯಿಸಿದ ಹನುಮ ಭಕ್ತರು ಮಸೀದಿಯತ್ತ ಮುಖಮಾಡಿ ಸುಮಾರು 1 ಗಂಟೆ ಹನುಮನ ಸ್ಮರಣೆಯೊಂದಿಗೆ ಘೋಷಣೆಗಳನ್ನು ಕೂಗುತ್ತಾ ಕೇಸರಿ ಶಾಲುಗಳನ್ನು ತಿರುವಿದರು. ಈ ವೇಳೆ ಹನುಮನ ಪಾದದ ಮೇಲಾಣೆ ಮಂದಿರವನ್ನೇ ಕಟ್ಟುವೆವು, ರಕ್ತದ ಕಣ ಕಣ ಕುದಿಯುತ್ತಿದೆ, ಹಿಂದು ಹಿಂದು ಎನ್ನುತ್ತಿದೆ. ಜೈ ಶ್ರೀರಾಮ್, ಜೈ ಜೈ ರಾಮ್, ಜೈ ರಘು ನಂದನ, ಜೈ ಬಜರಂಗಿ ಘೋಷಣೆಗಳನ್ನು ಕೂಗಿದರು. ಅಯೋಧ್ಯೆಯಲ್ಲಿ ಶ್ರೀರಾಮ, ಶ್ರೀರಂಗಪಟ್ಟಣದಲ್ಲಿ ಹನುಮ ಎನ್ನುತ್ತಾ ಕೇಸರಿ ಧ್ವಜಗಳನ್ನು ಹಿಡಿದು ಕುಣಿದು ಕುಪ್ಪಳಿಸಿದರು.
ಪುರಸಭೆ ಮುಂಭಾಗದ ಬಂಡಿಸಿದ್ದೇಗೌಡ ವೃತ್ತಕ್ಕೆ ಸಂಕೀರ್ತನ ಯಾತ್ರೆ ಆಗಮಿಸುತ್ತಿದ್ದಂತೆ ಕೆಲ ಮಾಲಾಧಾರಿಗಳು ಜಾಮಿಯಾ ಮಸೀದಿ ಕಡೆಗೆ ನುಗ್ಗಲು ಪ್ರಯತ್ನಿಸಿದ್ದರಿಂದ ಪೊಲೀಸರು ಮತ್ತು ಮಾಲಾಧಾರಿಗಳ ನಡುವೆ ವಾಗ್ವಾದ, ತಳ್ಳಾಟ-ನೂಕಾಟಕ್ಕೆ ಕಾರಣವಾಯಿತು. ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಮಸೀದಿ ಆವರಣದ ಉದ್ದಕ್ಕೂ ಪೊಲೀಸ್ ವಾಹನಗಳನ್ನು ನಿಲ್ಲಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ನಿಂತಿದ್ದ ಸಾವಿರಾರು ಪೊಲೀಸರು ಹನುಮ ಭಕ್ತರನ್ನು ತಡೆದು ಯಾತ್ರೆಯನ್ನು ಮುಂದಕ್ಕೆ ಕಳುಹಿಸಲು ಮುಂದಾದರು. ಈ ವೇಳೆ ಹನುಮ ಮಾಲಾಧಾರಿಗಳು ಸುಮಾರು ಏಳೆಂಟು ಬಾರಿ ಮುನ್ನುಗ್ಗಲು ಯತ್ನಿಸುವುದನ್ನು ಮನಗಂಡ ಪೊಲೀಸರು ಮಾಲಾಧಾರಿಗಳನ್ನು ಮುಂದಕ್ಕೆ ನಡೆಯುವಂತೆ ಚದುರಿಸಿದರು. ಈ ವೇಳೆ ತಳ್ಳಾಟ-ನೂಕಾಟ ಏರ್ಪಟ್ಟು ಸಾಕಷ್ಟು ಜನರು ನೆಲಕ್ಕುರುಳಿದರು. ಪರಿಸ್ಥಿತಿ ಕೈ ಮೀರಲು ಅವಕಾಶ ಕೊಡದ ಪೊಲೀಸರು ಎಲ್ಲರನ್ನು ಶಾಂತಿಯುತವಾಗಿ ಮುಂದೆ ಕಳುಹಿಸಿದರು.
ಬಳಿಕ ಮುಖ್ಯರಸ್ತೆಯ ಮಾರ್ಗವಾಗಿ ಸಾಗಿದ ಯಾತ್ರೆ ಮೂಡಲು ಬಾಗಿಲು ಆಂಜನೇಯಸ್ವಾಮಿ ದೇವಾಲಯ ಮುಂಭಾಗಕ್ಕೆ ತಲುಪುತ್ತಿದ್ದಂತೆ ದೇವಾಲಯದ ವೈದಿಕರು ಹನುಮ ಭಕ್ತರ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿದರು. ಅಂತಿಮವಾಗಿ ಶ್ರೀರಂಗನಾಥ ಸ್ವಾಮಿ ಮೈದಾನದಲ್ಲಿ ಮಾಲಾಧಾರಿಗಳು ಮಾಲೆ ವಿಸರ್ಜನೆ ಮಾಡಿ ಅನ್ನಪ್ರಸಾದ ಸ್ವೀಕರಿಸಿದರು.
ಸಂಕೀರ್ತನಾ ಯಾತ್ರೆಯಲ್ಲಿ 103 ವರ್ಷದ ವೃದ್ಧೆಯೊಬ್ಬರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಿಮಲಾಪುರ ಗ್ರಾಮದ ಶಿವಮ್ಮ ಸುಮಾರು 5 ಕಿಮೀ ಮಾಲಾಧಾರಿಗಳೊಂದಿಗೆ ಹೆಜ್ಜೆ ಹಾಕಿದರು. ತಮ್ಮ ಮಗನೊಂದಿಗೆ ಪ್ರವಾಸಕ್ಕೆ ಬಂದಿದ್ದ ಅಜ್ಜಿ ಯಾತ್ರೆ ವಿಷಯ ತಿಳಿದು ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಂಕೀರ್ತನ ಯಾತ್ರೆ ಶಾಂತಿಯುತವಾಗಿ ಪೂರ್ಣಗೊಳ್ಳುವಂತೆ ಶ್ರಮಿಸಿದರು. ಯಾತ್ರೆ ಆರಂಭವಾದ ಸ್ಥಳದಿಂದ ಸಾಗುವ ಮಾರ್ಗದುದ್ದಕ್ಕೂ ಸಂಪೂರ್ಣ ಕಟ್ಟೆಚ್ಚರ ವಹಿಸಿ, ಹೆಜ್ಜೆ ಹೆಜ್ಜೆಗೂ ಬಿಗಿ ಭದ್ರತೆ ಹಾಕಲಾಗಿತ್ತು. ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಯಾವುದೇ ಸಮಸ್ಯೆಯಾಗದಂತೆ ಜಾಗ್ರತೆ ವಹಿಸಿದ್ದರು.
ಯಾತ್ರೆಯ ಮಾರ್ಗಮಧ್ಯೆ ಎರಡು ಭಾಗದಲ್ಲಿ ಸುಮಾರು ಅರ್ಧ ಗಂಟೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿ ವಾಹನ ಸವಾರರು ಪರದಾಡಿದರು. ಈ ವೇಳೆ ಸಂಚಾರ ಪೊಲೀಸರು ಬದಲಿ ಮಾರ್ಗಗಳ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.