ಮಂಡ್ಯ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಾಯಿ ಸಂಗೀತೋತ್ಸವ ಕಾರ್ಯಕ್ರಮವನ್ನು ರಾಜೀವ್‌ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಭಗವಾನ್ ಉದ್ಘಾಟಿಸಿದರು.
- ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
- ಜನ್ಮಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಆಯೋಜನೆ
ಮಂಡ್ಯ: ಭಗವಾನ್ ಸತ್ಯಸಾಯಿ ಬಾಬಾ ಮತ್ತು ಮಡಿಯಾಲ ನಾರಾಯಣ ಭಟ್ ಅವರ ಜನ್ಮಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಜನರು ಮನಸೋತರು.
ಪ್ರಶಾಂತಿ ಸೇವಾ ಟ್ರಸ್ಟ್ (ಸತ್ಯಸಾಯಿ ಹಿರಿಯ ವಿದ್ಯಾರ್ಥಿಗಳ ಸಮೂಹ) ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನಿಂದ ಸಾಯಿ ಸಂಗೀತೋತ್ಸವ ಶೀರ್ಷಿಕೆಯಡಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಹಾಗೂ ಸತ್ಯಸಾಯಿ ಲೋಕಸೇವಾ ಗುರುಕುಲಂನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಂಗೀತ ಹಾಗೂ ಸ್ವರಮೇಳ ಕೇಳುಗರನ್ನು ಮಂತ್ರಮುಗ್ಧರನ್ನಾಗುವಂತೆ ಮಾಡಿತು.
ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ರಾಜೀವ್‌ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಭಗವಾನ್ ಮಾತನಾಡಿ, ಸಮಾಜದ ಉನ್ನತಿಗೆ ಶ್ರಮಿಸುವವರು ಟೀಕೆ ವಿಮರ್ಶೆಗಳಿಗೆ ತಲೆಕೆಡೆಸಿಕೊಳ್ಳದೆ ಗುರಿಯತ್ತ ಸಾಗಿದರೆ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿಗಳು ಮಠ-ಮಾನ್ಯರಲ್ಲಿ ಕಲಿಯುವುದರಿಂದ ಶಿಸ್ತನ್ನು ಮೈಗೂಡಿಸಿಕೊಳ್ಳುತ್ತಾರೆ. ಶಿಸ್ತಿನಿಂದ ಬೆಳೆಯುತ್ತಾರೆ ಎಂಬ ನಂಬಿಕೆ ಜನರಲ್ಲಿದೆ ಎಂದರು.
ಮಂಡ್ಯದ ಬಹುತೇಕ ಜನ ದಕ್ಷಿಣ ಕನ್ನಡದಲ್ಲಿ ವಿದ್ಯಾಭ್ಯಾಸ ನಡೆಸಿರುವುದು ಅವರು ನಂಬಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಪ್ರಬುದ್ಧ ಆತ್ಮ ಹೊಂದಿರುವವರು ಯಾವುದೇ ಟೀಕೆ ಆರೋಪಗಳಿಗೆ ಗಮನ ಕೊಡುವುದಿಲ್ಲ. ಟೀಕೆಗಳು ಸಾಯುತ್ತವೆ, ಸಾಧನೆಗಳು ಬೆಳಗುತ್ತವೆ. ಒಬ್ಬ ವೈದ್ಯ ತಪ್ಪು ಮಾಡಿದರೆ ಒಬ್ಬರೋ, ಇಬ್ಬರೋ ರೋಗಿ ಸಾಯಬಹುದು. ಆದರೆ ಶಿಕ್ಷಕರು ತಪ್ಪು ಮಾಡಿದರೆ ಒಂದು ತಲೆಮಾರು ಸಂಕಷ್ಟಕ್ಕೀಡಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಶಿಸ್ತು, ಸಂಯಮ ಯಾರಲ್ಲಿರುತ್ತದೋ ಅವರು ಯಶಸ್ಸು ಸಾಧಿಸುವುದು ಖಚಿತ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಮುಂದಿನ ಹೆಜ್ಜೆ ಇಡಬೇಕು. ಆಸ್ತಿಕನಾಗಲೀ, ನಾಸ್ತಿಕನಾಗಲೀ, ತಾವು ಆರೋಗ್ಯವಾಗಿದ್ದು, ಇತರರನ್ನೂ ಆರೋಗ್ಯವಾಗಿರಿಸಿಕೊಳ್ಳುವುದು ಸದ್ದರ್ಮವಾಗಿದೆ. ಮಕ್ಕಳಿಗೆ ಕೇವಲ ಪಠ್ಯ ಪುಸ್ತಕ ಮಾತ್ರ ಶೈಕ್ಷಣಿಕ ಅಭಿವೃದ್ಧಿಗೆ ಸಾಧನವಲ್ಲ. ಜತೆಗೆ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯವಾಗಿರುತ್ತವೆ ಎಂದು ಅಭಿಪ್ರಾಯಿಸಿದರು.
ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಸತ್ಯಸಾಯಿ ಲೋಕ ಸೇವಾ ಗುರುಕುಲಂನ ಹಿರಿಯ ವಿದ್ಯಾರ್ಥಿಗಳಾದ ಖ್ಯಾತ ವೈದ್ಯ ಡಾ.ಕೆ.ಚಂದ್ರಶೇಖರ್, ನಾರಾಯಣ್, ಗೌರವ್, ಜಯರಾಮರೆಡ್ಡಿ ಇತರರಿದ್ದರು.