ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಾಯಿ ಸಂಗೀತೋತ್ಸವದ ಫೋಸ್ಟರ್ ಬಿಡುಗಡೆ ಮಾಡಲಾಯಿತು.  
ಮಂಡ್ಯ

ಫೆ.21ರಂದು ಮಂಡ್ಯ ನಗರದ ಕಲಾಮಂದಿರದಲ್ಲಿ ಸಾಯಿ ಸಂಗೀತೋತ್ಸವ: ಸತ್ಯ ಸಾಯಿ ಲೋಕ ಸೇವಾ ಗುರುಕುಲಂನ ವಿದ್ಯಾರ್ಥಿಗಳಿಂದ ವಿಶೇಷ ಕಾರ್ಯಕ್ರಮ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಂಗೀತ ಮತ್ತು ಸ್ವರಮೇಳ
  • ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್ ಮಾಹಿತಿ
ಮಂಡ್ಯ: ಪ್ರಶಾಂತಿ ಸೇವಾ ಟ್ರಸ್ಟ್(ಸತ್ಯಸಾಯಿ ಹಿರಿಯ ವಿದ್ಯಾರ್ಥಿಗಳ ಸಮೂಹ) ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಸಹಯೋಗದೊಂದಿಗೆ ಫೆ.21ರಂದು ಸಂಜೆ 4.30ಕ್ಕೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಸಾಯಿ ಸಂಗೀತೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ, ಹಿರಿಯ ವಿದ್ಯಾರ್ಥಿ ಡಾ.ಎ.ವಿ.ಉಮೇಶ್ ತಿಳಿಸಿದರು.
ಭಗವಾನ್ ಸತ್ಯಸಾಯಿ ಬಾಬಾ ಮತ್ತು ಮಡಿಯಾಲ ನಾರಾಯಣ ಭಟ್ ಅವರ ಜನ್ಮ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಸತ್ಯ ಸಾಯಿ ಲೋಕ ಸೇವಾ ಗುರುಕುಲಂನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಅಂದು ಸಂಗೀತ ಮತ್ತು ಸ್ವರಮೇಳ ನಡೆಯಲಿದೆ. ಇದೊಂದು ವಿಶೇಷ ಸಂಗೀತ ಕಾರ್ಯಕ್ರಮ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೇದಿಕೆ ಕಾರ್ಯಕ್ರಮವನ್ನು ಬೆಂಗಳೂರು ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಉದ್ಘಾಟಿಸುವರು. ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ನಿರ್ದೇಶಕ ಡಾ.ನರಸಿಂಹಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸತ್ಯಸಾಯಿ ಲೋಕ ಸೇವಾ ಗುರುಕುಲಂನ ಹಿರಿಯ ವಿದ್ಯಾರ್ಥಿ, ತಾರಾ ಡಯಗ್ನೋಸ್ಟಿಕ್ ಸೆಂಟರ್‌ನ ರೋಗಶಾಸ್ತ್ರ ತಜ್ಞ ಡಾ.ಕೆ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಗುರುಕುಲಂನ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.
ರೋಗಶಾಸ್ತ್ರ ತಜ್ಞ ವೈದ್ಯ ಡಾ.ಕೆ.ಚಂದ್ರಶೇಖರ್, ಮಧುರ ಮಂಡ್ಯ ಕಲಾಟ್ರಸ್ಟ್ ಕಾರ್ಯದರ್ಶಿ ಚಿಕ್ಕ ಸಿದ್ದಯ್ಯ, ಖಜಾಂಚಿ ರಾಮಲಿಂಗೇಗೌಡ, ಸರ್ಕಾರಿ ನೌಕರರ ಸಂಘದ ರಘು ಇದ್ದರು.