ಶ್ರೀರಂಗಪಟ್ಟಣ : ರಾಜ್ಯದಲ್ಲಿ ಪ್ರತಿಟನ್ ಕಬ್ಬು ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ 1 ಸಾವಿರ ಪ್ರೋತ್ಸಾಹ ಧನದೊಂದಿಗೆ ಒಟ್ಟು 5,500 ರೂ. ನಿಗದಿಗೊಳಿಸಬೇಕು ಹಾಗೂ ಬೆಳಗಾವಿಯಲ್ಲಿ ಕಬ್ಬು ಬೆಳೆ ಹೋರಾಟಗಾರರ ಮೇಲೆ ಪೊಲೀಸರಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ಬಂಧನ ಕ್ರಮ ನಿಲ್ಲಿಸಬೇಕು ಎಂದು ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಗುರುವಾರ ಜಮಾವಣೆಗೊಂಡ ಸಮಿತಿಯ ಕಾರ್ಯಕರ್ತರು ಕೆಲಕಾಲ ಹೆದ್ದಾರಿ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಸಾಲು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯದಲ್ಲಿ ರೈತರಿಗೆ ದರ ನೀಡುವಲ್ಲಿ ನಾವು ನಷ್ಟದಲ್ಲಿ ಇದ್ದೇವೆ ಎನ್ನುವ ಸಕ್ಕರೆ ಕಾರ್ಖಾನೆ ಮಾಲೀಕರು ಪುನಃ 39 ಹೊಸ ಕಾರ್ಖಾನೆಗಳನ್ನು ತೆರೆಯಲು ಸರ್ಕಾರದ ಅನುಮತಿಗಾಗಿ ಅರ್ಜಿ ಹಾಕಿದ್ದಾರೆ. ಜತೆಗೆ ಹೆಲಿಕಾಪ್ಟರ್ನಲ್ಲೇ ತಮ್ಮ ಓಡಾಟ ನಡೆಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಧ್ವನಿ ಎತ್ತಿರುವ ಉತ್ತರ ಕರ್ನಾಟಕ ಕಬ್ಬು ಹೋರಾಟಗಾರರ ಹೋರಾಟ ಪ್ರಾಮಾಣಿಕವಾಗಿದ್ದು, ಇದಕ್ಕೆ ಈ ಭಾಗದ ರೈತರು ಬೆಂಬಲಿಸಿ ಹೋರಾಟ ನಡೆಸುತ್ತೇವೆ. ಬೆಳಗಾವಿಯಲ್ಲಿ ಕಬ್ಬು ಹೋರಾಟ ಮಾಡುತ್ತಿದ್ದ ಹೋರಾಟಗಾರರನ್ನು ಪೊಲೀಸರಿಂದ ಬಂಧಿಸಿ ಹೋರಾಟ ಹತ್ತಿಕ್ಕುವ ರಾಜ್ಯಸರ್ಕಾರ ನೀತಿ ವಿರುದ್ಧ ಇನ್ನಷ್ಟು ಹೋರಾಟ ತೀಕ್ಷ್ಣಗೊಳಿಸಲು ಸಿದ್ಧವಿದ್ದೇವೆ. ಕೇಂದ್ರ ಸರ್ಕಾರ ಶೀಘ್ರ ಕಬ್ಬು ಬೆಳೆಗೆ ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ರಾಜ್ಯಸರ್ಕಾರ ಕಬ್ಬು ಬೆಳೆಯ ಸಕ್ಕರೆ ಮಾತ್ರವಲ್ಲದೆ ಇತರೆ ಉತ್ಪನ್ನಗಳಿಂದ ಸಕಾಷ್ಟು ಆದಾಯಗಳಿಸಲಾಗುತ್ತಿದೆ. ಜತೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಕಬ್ಬು ಬೆಳೆಗಾರರಿಗೆ ತಾರತಮ್ಯದ ಬೆಲೆ ನಿಗದಿಪಡಿಸಿ ಹಿಂದಿನಿಂದಲೂ ವಂಚನೆ ಎಸಗುತ್ತಿದ್ದು, ಸಮಸ್ತ ಕರ್ನಾಟಕ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಗೊಳಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಟನ್ಗೆ 5500 ರೂ.ನೀಡಿ ಕಬ್ಬು ಬೆಳೆಗಾರರ ಹಿತ ಕಾಯಬೇಕು ಎಂದರು.
ಭೂಮಿ ತಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ಗಂಜಾಂ ಮರೀಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಮುಖಂಡರುಗಳಾದ ಅಚ್ಚಪ್ಪನಕೊಪ್ಪಲು ರವಿ ಲಕ್ಷ್ಮಣ, ಕಪರನಕೊಪ್ಪಲು ಸುರೇಶ್, ನೆಲಮನೆ ಶಿವನಂಜೇಗೌಡ, ಕಡತನಾಳು ಚಾಮರಾಜು, ಚಿಂದಗಿರಿಕೊಪ್ಪಲು ರಾಮಚಂದ್ರು, ಕೂಡಲಕುಪ್ಪೆ ಸ್ವಾಮಿಗೌಡ, ಕೆ.ಶೆಟ್ಟಹಳ್ಳಿ ಮಹಾಲಿಂಗು, ಶಂಕರ್ ಮಾರಸಿಂಗನಹಳ್ಳಿ ತಿಮ್ಮೇಗೌಡ, ಪಾಲಹಳ್ಳಿ ರಾಮಚಂದ್ರು, ಚಂದಗಾಲು ಪುರುಷೋತ್ತಮ್, ರಾಮಕೃಷ್ಣ, ಮೇಳಾಪುರ ಬಾಲು ದೇವರಾಜು ಇತರರಿದ್ದರು.