ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿದರು.  
ಮಂಡ್ಯ

ಬೆಂಗಳೂರಿಗೆ ನೀರು, ಮಂಡ್ಯ ರೈತರಿಗೆ ಕಣ್ಣೀರು: ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಭಿಪ್ರಾಯ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ಆರನೇ ಹಂತದ ಯೋಜನೆ ರದ್ದುಗೊಳಿಸಲು ಸರ್ಕಾರಕ್ಕೆ ಹಕ್ಕೊತ್ತಾಯ
  • ನಗರದ ಗಾಂಧಿಭವನದಲ್ಲಿ ದುಂಡು ಮೇಜಿನ ಸಭೆ
ಮಂಡ್ಯ: ಬೆಂಗಳೂರಿಗೆ ಕುಡಿಯುವ ನೀರೊದಗಿಸುವ ಆರನೇ ಹಂತದ ಯೋಜನೆಯಿಂದಾಗುವ ಸಮಸ್ಯೆ ಕುರಿತು ಚರ್ಚಿಸಲು ನಗರದಲ್ಲಿ ದುಂಡು ಮೇಜಿನ ಸಭೆ ಆಯೋಜಿಸಲಾಗಿತ್ತು. ಅದರಂತೆ ವಿವಿಧ ಸಂಘಟನೆಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಒಟ್ಟಾರೆ, ಯೋಜನೆ ಅನುಷ್ಠಾನದಿಂದಾಗಿ ಬೆಂಗಳೂರಿನ ಜನರಿಗೆ ನೀರು, ಮಂಡ್ಯ ರೈತರಿಗೆ ಕಣ್ಣೀರು ಎನ್ನುವ ಮಾತು ಕೇಳಿಬಂತು.
ಗಾಂಧಿಭವನದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಹೊತ್ತು ಚರ್ಚೆ ನಡೆಯಿತು. ಅಂತಿಮವಾಗಿ ಐದು ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಾಡಲು ತೀರ್ಮಾನಿಸಲಾಯಿತು.
ಪರಿಸರ ಮಾಲಿನ್ಯ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆ ನೀರು ಇರುವುದು ಕೃಷಿಗೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗಿದೆ. ಆದರೂ ಪ್ರಮುಖವಾಗಿ ವ್ಯವಸಾಯಕ್ಕೆ ನೀರು ಮೀಸಲಿಡಬೇಕೆಂಬುದು ಮಾನವೀಯ ಗುಣ. ಇದುವರೆಗೂ ಮಂಡ್ಯ ರೈತರು ಸೇರಿದಂತೆ ಕಾವೇರಿ ಕೊಳ್ಳದ ಜನರು ಹೊರರಾಜ್ಯವಾದ ತಮಿಳುನಾಡಿಗೆ ನೀರು ಹರಿಸಬೇಕೆನ್ನುವುದನ್ನು ವಿರೋಧಿಸಿ ನಮ್ಮ ನೀರು ನಮ್ಮ ಹಕ್ಕು ಎಂಬ ಹೊಡೆದಾಟ ನಡೆಯುತ್ತಿತ್ತು. ಈಗ ನಾವು ಬೆಂಗಳೂರು ಮತ್ತು ಮಂಡ್ಯ ನಡುವೆ ಹೋರಾಟ ನಡೆಸುತ್ತಿದ್ದೇವೆ. ನಮ್ಮನ್ನಾಳುವಂತ ಸರ್ಕಾರದ ನಾಯಕರ ಕಲ್ಪನೆ ಏನಿದಿಯೋ ಅದರಂತೆ ನಡೆಯುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಿಂದ ಕಾವೇರಿಕೊಳ್ಳದ ರೈತರಿಗೆ ಯಾವ ಅನುಕೂಲವಿದೆ. ಅವರಿಗೆ ಕೆಅರ್‌ಎಸ್ ಅಣೆಕಟ್ಟೆ ನೀರು ತೆಗೆದುಕೊಂಡು ಹೋಗಲು ಬಿಡಬೇಕಾ?. ಭೂಮಿ ಅಭಿವೃದ್ಧಿ ಹಾಗೂ ಕುಡಿಯುವ ನೀರಿಗೆ ಬೇರೆ ವ್ಯವಸ್ಥೆಯನ್ನು ಅಲ್ಲೇ ಬೆಂಗಳೂರಿನ ಪಕ್ಕದಲ್ಲಿ ಮಾಡಿಕೊಳ್ಳಲಿ. ಬಿಡದಿಯ ಟೌನ್‌ಶಿಪ್ ಅಭಿವೃದ್ಧಿಗೆ ನೀರು ಅಪವ್ಯಯವಾಗುವುದನ್ನು ಕೇಳಿದ್ದೇನೆ. ಕಾವೇರಿ ಸಲಹಾ ಸಮಿತಿಯಿಂದ ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಒಪ್ಪಂದವಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿಯೂ ತಿಳಿಸಲಾಗಿದೆ. ಕಾವೇರಿಕೊಳ್ಳದಿಂದ ಬರುವ ನೀರಿನ ಪೈಕಿ ಶೇ.50 ರಷ್ಟು ನೀರು ಕೊಡಬೇಕು. ಇಷ್ಟು ನೀರು ಮಳೆ ಬಂದರೆ ಅಷ್ಟೇ ಸಿಗುವುದು ಎಂಬುದನ್ನು ಎಲ್ಲಿಯೂ ಹೇಳಿಲ್ಲ ಏಕೆ?. ಕೊನೆಯಲ್ಲಿ ನಮಗೆ ನೀರು ಸಿಗುವುದು ಕೂಡ ಅನುಮಾನವಿದೆ. ಹಾಗಾಗಿ ಇನ್ನು ಮುಂದೆ ಸರ್ಕಾರದ ಯಾವುದೇ ಕುಡಿಯುವ ನೀರಿನ ಯೋಜನೆ ವಿರೋಧಿಸುವ ಹೋರಾಟ ಹೆಚ್ಚಾಗಬೇಕು. ಇಲ್ಲವಾದರೆ ತೊಂದರೆಗೆ ಸಿಲುಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನೀರನ್ನು ಎಲ್ಲಿ ನಾವು ಹಿಡಿದಿಟ್ಟುಕೊಂಡಿದ್ದೇವೆ ಹೇಳಿ?. ನೈಸರ್ಗಿಕವಾಗಿ ಮಳೆ ಬರುತ್ತದೆ. ಅದು ಬಂದರೆ ಬಂತು ಇಲ್ಲದೇ ಇದ್ದರೆ ಇಲ್ಲ. ಆ ನೀರು ಕಾವೇರಿಕೊಳ್ಳದ ಕಬಿನಿ ಜಲಾಶಯ ಮತ್ತು ಕೆಆರ್‌ಎಸ್ ಅಣೆಕಟ್ಟೆಗೆ ನೀರು ಹರಿದುಬರುತ್ತದೆ. ಆ ಮೂಲಕ ಕೃಷಿ, ಕುಡಿಯುವ ನೀರು ಬಳಕೆಯಾಗುತ್ತದೆ. ಇಲ್ಲಿ ನೀರನ್ನು ಉಪಯೋಗಿಸಿಕೊಳ್ಳಿ ಎನ್ನುವುದನ್ನೂ ಹೇಳಿಲ್ಲ. ಕೆಆರ್‌ಎಸ್, ಕಬಿನಿ ಡ್ಯಾಂಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಕರ್ನಾಟಕದಲ್ಲಿ ಬೀಳುವ ಎರಡನೇ ಮೂರು ಭಾಗದಷ್ಟು ನೀರನ್ನು ನಾವು ಸಂಗ್ರಹಿಸಿಕೊಳ್ಳಲು ನಮಗೆ ಹಕ್ಕಿಲ್ಲ ಎಂದು ಕಿಡಿಕಾರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಎಐ ತಂತ್ರಜ್ಞಾನಕ್ಕೆ ಬಳಸಿಕೊಂಡ ನೀರು, ಮತ್ತೆ ಅದನ್ನು ಹೊರಗಡೆ ಬಿಟ್ಟರೆ ಅದನ್ನು ಯಾವುದೇ ಕಾರಣಕ್ಕೂ ಬಳಕೆಯಾಗುವುದಿಲ್ಲ. ಕಾವೇರಿ ನೀರನ್ನು ಬಳಸಲು ಸರ್ಕಾರ ಮುಂದಾದರೆ ರೈತರ ಬಾಯಿಗೆ ಮಣ್ಣು ಬೀಳುತ್ತದೆ. ಇದಕ್ಕೆ ಅವಕಾಶ ನೀಡದೇ ನೀರನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್‌ನಿಂದ 6 ಟಿಎಂಸಿ ನೀರು ತೆಗೆದುಕೊಂಡು ಹೋಗುವ ಈ ಯೋಜನೆ ರೈತರಿಗೆ ಮಾರಕವಾಗಲಿದೆ. ಕೃಷಿಗೆ ದೊಡ್ಡಮಟ್ಟದ ಪೆಟ್ಟು ಬೀಳುವ ಸಂಭವವಿದೆ. ಹಾಗಾಗಿ ನಮ್ಮ ರೈತರನ್ನು ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಸಂಘಟನೆಗಳು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳೋಣ. ಸರ್ಕಾರ ಯೋಜನೆ ಕೈಬಿಡುವ ತನಕ ಹೋರಾಟ ಮಾಡೋಣ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಿತಿಯ ಹಿರಿಯ ಉಪಾಧ್ಯಕ್ಷ ಕೆ.ಬೋರಯ್ಯ, ಸಾಹಿತಿ ಜಿ.ಟಿ.ವೀರಪ್ಪ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಕನ್ನಡಸೇನೆ ಮಂಜುನಾಥ್, ಕರುನಾಡು ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಕರವೇ ಜಯರಾಂ, ರಾಜುಗೌಡ ಸೀಹಳ್ಳಿ, ಎಂ.ವಿ.ಕೃಷ್ಣ, ಸಂತೋಷ್‌ಗೌಡ, ಮುದ್ದೇಗೌಡ, ಟಿ.ಡಿ.ಬಸವರಾಜು, ಮಹಾಂತಪ್ಪ ಇತರರಿದ್ದರು.

ಸಭೆಯಲ್ಲಿ ತೆಗೆದುಕೊಂಡ ಐದು ನಿರ್ಣಯ
* ಮಂಡ್ಯ ಜಿಲ್ಲೆಯ ಕೃಷಿ ಬದುಕಿಗೆ ಮಾರಕ ಕಾವೇರಿ ಆರನೇ ಹಂತದ ಯೋಜನೆಗೆ ವಿರೋಧ
* ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಪರ್ಯಾಯ ವ್ಯವಸ್ಥೆ ಮೂಲಕ(ಮಳೆ ನೀರು) ನೀರು ಒದಗಿಸುವ ಯೋಜನೆ ರೂಪಿಸಿಕೊಳ್ಳಲು ಒತ್ತಾಯ
* ಕೆಆರ್‌ಎಸ್‌ನಿಂದ ಬೆಂಗಳೂರಿಗೆ 6ನೇ ಹಂತ ಹಾಗೂ ಮೈಸೂರಿನ ಹಳೇ ಹುಂಡುವಾಡಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ರೂಪಿಸಿರುವ ಸರ್ಕಾರದ ನಿಲುವು ಬದಲಾಗಬೇಕು
* ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆಯನ್ನು ಹಿಂಪಡೆಯುವಂತೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು
* ಸರ್ಕಾರ ಒತ್ತಾಯಕ್ಕೆ ಸ್ಪಂದಿಸದಿದ್ದರೆ ಕಟ್ಟೇರಿಯಲ್ಲಿ ತೀವ್ರತರ ಹೋರಾಟಕ್ಕೆ ರೂಪಿಸುವುದು