ಮಂಡ್ಯ ನಗರದ ಹೊರವಲಯದ ಖಾಸಗಿ ಸಭಾಂಗಣದಲ್ಲಿ ರೋಟರಿ ವೈಭವ ಸಮಾರಂಭ ಆಯೋಜಿಸಲಾಗಿತ್ತು.  
ಮಂಡ್ಯ

ಸೇವೆಗೆ ಆಧಾರ ಪ್ರೌವೃತ್ತಿ ಮನೋಭಾವ: ರಂಗಕರ್ಮಿ ಟಿ.ಎಸ್.ನಾಗಾಭರಣ ಬೇಸರ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ರೋಟರಿ ವೈಭವ ಸಮಾರಂಭ
  • ಒಳಿತಿಗಾಗಿ ಒಂದಾಗಿ ಘೋಷವಾಕ್ಯದೊಂದಿಗೆ ಅಂತರನಗರಿ ಸಮ್ಮೇಳನ
ಮಂಡ್ಯ: ನಮ್ಮಲ್ಲಿ ಬಹಳಷ್ಟು ಜನರಿಗೆ ಭಾಷೆ ಮತ್ತು ಸಂಸ್ಕೃತಿಯ ನಿಜವಾದ ಅರ್ಥ ಗೊತ್ತಾಗಿಲ್ಲ. ಕಾರಣ, ಬದುಕು ಬೇರೆನೇ ಆಗಿದೆ. ವೃತ್ತಿಗಳು ಸಾವಿರಾರಿವೆ. ಆದರೆ ಪ್ರೌವೃತ್ತಿ ಕಾಣದಾಗಿದೆ. ರೋಟರಿಯನ್ ಆಗುವುದು ಪ್ರೌವೃತ್ತಿ, ವೃತ್ತಿಯಲ್ಲ. ವೃತ್ತಿಗೆ ನಿವೃತ್ತಿ ಇರುತ್ತದೆ. ಅದೇ ಪ್ರೌವೃತ್ತಿಗೆ ಇರಲ್ಲ. ಸೇವೆಗೆ ಆಧಾರ ಪ್ರೌವೃತ್ತಿ ಮನೋಭಾವ ಎಂದು ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಟಿ.ಎಸ್.ನಾಗಾಭರಣ ಹೇಳಿದರು.
ನಗರದ ಹೊರವಲಯದ ಖಾಸಗಿ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಮದ್ದೂರು ರೋಟರಿ ಸಂಸ್ಥೆ ಆರ್‌ಐ ಜಿಲ್ಲೆ 3192 ಸಹಯೋಗದಲ್ಲಿ ಒಳಿತಿಗಾಗಿ ಒಂದಾಗಿ ಘೋಷವಾಕ್ಯದೊಂದಿಗೆ ಅಂತರನಗರಿ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ರೋಟರಿ ವೈಭವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ನಂಬಿಕೆ ಮತ್ತು ನೆನಪುಗಳು ವ್ಯಕ್ತತ್ವ ರೂಪಿಸುತ್ತವೆ. ಯಾವುದನ್ನು ನಂಬಿದರೆ ಬದುಕು ಮುಂದುವರಿಯುತ್ತದೆ, ನಂಬಿಕೆಯಿಲ್ಲದಿದ್ದರೆ ನಮಗೆ ಬದುಕೆ ಇಲ್ಲ. ನೆನಪು ಮತ್ತು ನಂಬಿಕೆ ಈ ಎರಡೂ ಇಲ್ಲದಿದ್ದರೆ ನೀವೇ ಇಲ್ಲ. ಎಲ್ಲರಿಗೂ ನೆನಪು ಮಾಸಿಹೋಗುತ್ತದೆ ಎಂದರೆ ಏನಾಗುತ್ತಿತ್ತು, ನೆನಪಿನ ಮೂಕಾಂತರ ನಾಳೆಗಳ ನಂಬಿಕೆ ಇರಿಸಿಕೊಳ್ಳಬೇಕು, ಎಲ್ಲಿ ನೆನಪು ಇರುವುದಿಲ್ಲವೋ ಅಲ್ಲಿ ನಂಬಿಕೆ ಇರಲ್ಲ. ನಾವು ಯಾವುದನ್ನು ಸೇವೆ ಎಂದು ಕರೆಯುತ್ತೇವೆಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಕೊಡುವುದಾಗಿದೆ. ಮೊಬೈಲ್ ಬಂದ ಮೇಲಂತೂ ಪಬ್ಲಿಕ್ ಇಮೇಜ್ ಹೆಚ್ಚಾಗಿದೆ. ಅಂದಿನ ಕ್ಷಣ ಮಾಹಿತಿ ಅಲ್ಲಿಯೇ ರವಾನೆಯಾಗಿ ಬಿಡಬೇಕು. ಅಷ್ಟು ಇಮೇಜ್ ಬೆಳೆದಿದೆ ಎಂದು ಎಚ್ಚರಿಸಿದರು.
ಚಿತ್ರ ನಟಿ ಪೂಜಾಗಾಂಧಿ ಮಾತನಾಡಿ, ನಿಸ್ವಾರ್ಥ ಸೇವೆ ಮತ್ತು ವಿಶ್ವಮಾನವತೆಯನ್ನು ಬಸವಣ್ಣ, ಕುವೆಂಪು ಸಾರಿದರು. ಅವರ ವಿಚಾರಧಾರೆಗಳನ್ನು ಜನತೆಗೆ ತಿಳಿಸಬೇಕು. ರೋಟರಿ ಸಂಸ್ಥೆಯಿಂದ ಸೇವಾಕಾರ್ಯಗಳು ಅನುಪಮ ರೀತಿಯಲ್ಲಿ ನಡೆಯುತ್ತಿವೆ. ಮನುಷ್ಯ ಬೆಳೆಯುತ್ತಾ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ವಿಶ್ವಮಾನವತೆ ಬೆಳೆಸಿಕೊಳ್ಳಬೇಕು. ಸಾಧನೆಯಾಗಿ ರೂಪುಗೊಳ್ಳಬೇಕು ಎನ್ನುವುದನ್ನು ನಂಬಿದ್ದೇನೆ. ಮುಖ್ಯವಾಗಿ ಯುವ ಸಮುದಾಯವು ರೋಟರಿ ಸಂಸ್ಥೆಯನ್ನು ಸೇರಿ ವ್ಯಕ್ತಿ ಅಭಿವ್ಯಕ್ತಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದಾದಗಿದೆ ಎಂದರು.
ರೋಟರಿ ಸಂಸ್ಥೆ ಜಿಲ್ಲಾ ಪ್ರಾಂತಪಾಲೆ ಪ್ರೊ.ಎಲಿಜಬೆತ್ ಚೆರಿಯನ್, ಎಂಎಲ್‌ಸಿ ಎಂ.ನಾಗರಾಜ್ ಯಾದವ್, ಐಸಿಜಿಎಫ್ ಅಧ್ಯಕ್ಷ ಎನ್.ಹೊನ್ನೇಗೌಡ, ಮದ್ದೂರು ರೋಟರಿ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್, ನಿರ್ದೇಶಕ ದಿನೇಶ್, ಪಿಡಿಜಿ ಎಚ್.ಆರ್.ಕೇಶವ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಮಂಜುನಾಥ್, ಅಶೋಕ್, ಕದಲೂರು ಮಧು, ಸಾದೊಳಲು ಮಧು, ಅಕ್ಷರಂ ವೆಂಕಟೇಶ್, ರಾಜೇಶ್ ಇತರರಿದ್ದರು.