ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮ ಹೊರವಲಯದ ಕೆಂಪಯ್ಯನ ಹುಂಡಿ ಮಾರಮ್ಮನ ದೇವಸ್ಥಾನದ ಕೆಮ್ಮಣ್ಣುಪುರ ರಸ್ತೆ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಬಿ.ಗಿರೀಶ್, ಶಿವಕುಮಾರ್ ಹುರುಳಿಕ್ಯಾತನಹಳ್ಳಿ, ಗೋವಿಂದೇಗೌಡ ಇತರರು ಇದ್ದರು. 
ಮಂಡ್ಯ

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮ

ನಾಗೇಶ ಎಸ್
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಗಳಲ್ಲಿ ಆಗಬೇಕಾಗಿರುವ ಯಾವುದೇ ಕೆಲಸಗಳು ಮತ್ತು ಸಮಸ್ಯೆಗಳನ್ನು ನಿವಾರಿಸಲು ಸದಾ ಬದ್ಧನಿರುವೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.
ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮ ಹೊರವಲಯದ ಕೆಂಪಯ್ಯನ ಹುಂಡಿ ಮಾರಮ್ಮನ ದೇವಸ್ಥಾನದ ಕೆಮ್ಮಣ್ಣುಪುರ ರಸ್ತೆ ಹಾಗೂ ಚಿಕ್ಕಅಂಕಯ್ಯಹುಂಡಿ ವ್ಯಾಪ್ತಿಯ ವಿರಜಾ ಉಪನಾಲೆ ಅಭಿವೃದ್ಧಿಗೆ ಭಾನುವಾರ 10 ಕೋಟಿ ರೂ.ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಚಿಕ್ಕಅಂಕನಹಳ್ಳಿ ಗ್ರಾಮ ಸಮೀಪದ ವಿರಿಜಾ ಸಂಪರ್ಕ ನಾಲೆಯ ಏರಿ ರಸ್ತೆ ಹಳ್ಳ ಕೊಳ್ಳಗಳಿಂದ ಕೂಡಿದ್ದ ಕಾರಣ ರೈತರು ಬೆಳೆದ ಬೆಳೆಗಳನ್ನು ನಾಲೆಯ ಏರಿ ರಸ್ತೆ ಮೂಲಕ ಸಾಗಾಣಿಕೆ ಮಾಡಲು ತೊಂದರೆಯಾಗುತ್ತಿತ್ತು. ಹೀಗಾಗಿ ಈ ರಸ್ತೆ ಅಭಿವೃದ್ಧಿಗೆ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದು, ಸಚಿವರು ಸಹ ಮನವಿಗೆ ಸ್ಪಂದಿಸಿ 10 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಶೀಘ್ರವೇ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು.
ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ, ನಾಲೆಗಳು, ನೀರಾವರಿ ಅಭಿವೃದ್ಧಿ, ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಮೇಲ್ದರ್ಜೆ, ಆರೋಗ್ಯ ಕ್ಷೇತ್ರದಲ್ಲಿ ಕಾಳಜಿ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ ಇಂತಹ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ತಾರತಮ್ಯ ಮಾಡದೆ ಸಕ್ರಿಯವಾಗಿ ರಾಜ್ಯಸರ್ಕಾರ ನೀಡಿರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದೇನೆ. ಕ್ಷೇತ್ರದ ಜನರಿಗಾಗಿ ನಾನು ಖುದ್ದಾಗಿ ಯಾವ ಗ್ರಾಮಕ್ಕಾದರೂ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಲು ಸಿದ್ಧನಿದ್ದು, ನಿಮ್ಮ ಸಮಸ್ಯೆಗಳನ್ನು ನನಗೆ ನೇರವಾಗಿ ತಿಳಿಸಿ ಎಂದು ಮನವಿ ಮಾಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಗಿರೀಶ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೆಶಕ ಅರಕೆರೆ ಶಿವಯ್ಯ, ಶಿವಕುಮಾರ್ ಹುರುಳಿಕ್ಯಾತನಹಳ್ಳಿ, ಗ್ರಾಮದ ಮುಖಂಡರಾದ ಅಭಿಷೇಕ್, ಗಿಣಿಸ್ವಾಮಿ, ನಂಜೇಗೌಡ, ಶಾಂತರಾಜು, ರಾಮೇಗೌಡ, ವಾಸು, ವಿಜಿ ಶಾಂತರಾಜು, ಪ್ರದೀಪ್, ರಾಮಕೃಷ್ಣ, ಸುನೀಲ್, ಗೋವಿಂದೇಗೌಡ ಇದ್ದರು.