ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಪರಶುರಾಮ್‌ಸತ್ತಿಗೇರಿ, ರಾಧಿಕಾ, ದೇವಾನಂದ್ ಇದ್ದರು. 
ಮಂಡ್ಯ

ಐದು ತಿಂಗಳೊಳಗೆ ರಸ್ತೆ ಕಾಮಗಾರಿ ಆರಂಭ

ಲೋಕೇಶ್ ಮನು. ಡಿ
ಮದ್ದೂರು: ಐದು ತಿಂಗಳೊಳಗೆ ನಗರದ ಪೇಟೆಬೀದಿ ಅಗಲೀಕರಣ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ಅವರ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಪ್ರಮುಖ ಬೀದಿಯಾದ ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಣೆ ಮಾಡಲು ಈ ಹಿಂದೆ ಅನುಮೋದನೆ ಪಡೆಯಲಾಗಿತ್ತು. ಅದರಂತೆ ಸಂಬಂಧಪಟ್ಟ ಆಧಿಕಾರಿಗಳು ಡಿಪಿಆರ್ ಅನ್ನೂ ಕೂಡಾ ಸಿದ್ಧಪಡಿಸಿದ್ದರು, ಆದರೆ ಇತ್ತೀಚೆಗೆ ಕಾರಣಾಂತರಗಳಿಂದ 80 ಅಡಿಗಳಿಗೆ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತೀರ್ಮಾನವಾದ ಹಿನ್ನೆಲೆಯಲ್ಲಿ, ಪೇಟೆಬೀದಿಯನ್ನು 80 ಅಡಿಗಳಿಗೆ ವಿಸ್ತರಿಸಿಲು ಡಿಪಿಆರ್ ಸಿದ್ದಪಡಿಸಿ ಇಷ್ಟರಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಅದಕ್ಕಾಗಿಯೇ ಸೋಮವಾರ ತಹಸೀಲ್ದಾರ್, ಪೌರಾಡಳಿತ ಆಯುಕ್ತೆ, ಪಿ ಡಬ್ಲುಡಿ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ರಸ್ತೆಯ ವಿನ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರೀಕರಣಕ್ಕೆ ಜಾಗವನ್ನು ಕಳೆದುಕೊಳ್ಳುವವವರಿಗೆ ಈಗಿರುವ ಮೌಲ್ಯಕ್ಕಿಂತ 2 ಪಟ್ಟು ಪರಿಹಾರ ಹಾಗೂ ಶಿಫ್ಟಿಂಗ್‌ಗಾಗಿ ಹೆಚ್ಚುವರಿ 5ಲಕ್ಷ ರೂ., ಗಳನ್ನು ನೀಡುವುದಾಗಿ ತಿಳಿಸಿದರು.
ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರವಾಗಿ ಆರಂಭಿಸಬೇಕು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಸುಮಾರು 20 ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಐದು ತಿಂಗಳಲ್ಲಿ ಕಾನೂನಾತ್ಮಕವಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬನ್ನಹಳ್ಳಿ ಸೇರಿದಂತೆ ತಾಲೂಕಿನ ಹಲವು ಏತಾ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ತುರ್ತಾಗಿ ಪೂರ್ಣಗೊಳಿಸಿ ಮುಗಿಸಿ ರೈತರಿಗೆ ಬೇಸಾಯ ಮಾಡಲು ಅನುಕೂಲ ಕಲ್ಪಿಸಲಾಗುವುದು ಎಂದರು.
ನಾಡಿನ ಹಿರಿಯ ಚೇತನ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ಜನಾನುರಾಗಿ ನಿರಂತರವಾಗಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದರು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭೆ ಪೌರಾಯುಕ್ತೆ ರಾಧಿಕಾ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವಾನಂದ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿರ್ ನಾಗರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.