ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಕಾಲುವೆ ಹಾಗೂ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಶ್ರೀನಿವಾಸ್ಗೌಡ, ಕೆ.ಎಲ್.ಜಯರಾಮು, ಮನು, ಪಾಪಣ್ಣ, ಕೆಂಪರಾಜು, ರಾಜಣ್ಣ, ಯೋಗೇಶ್, ಮಾದೇಶ್ ಇದ್ದರು. road work
ಮಂಡ್ಯ
ಜಮೀನುಗಳಿಗೆ ನೀರು ಹರಿಸಲು ಯೋಜನೆ
ಮದ್ದೂರು: ತಾಲೂಕಿನ ಕೊನೆಯ ಭಾಗವಾಗಿರುವ ಕೂಳಗೆರೆ ವ್ಯಾಪ್ತಿಯ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲು ಶಾಶ್ವತ ಯೋಜನೆಯನ್ನು ಕೈಗೊಂಡಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಕೂಳಗೆರೆಯಲ್ಲಿ ಐಬಿಪಿ ಯೋಜನೆಯಡಿ 4.90 ಕೋಟಿ ರೂ.ವೆಚ್ಚದಲ್ಲಿ ಆರ್ಬಿಸಿ ಕಾಲುವೆ ಹಾಗೂ ಎಲ್ಐಎಸ್ಬಿ ಪಾಯಿಂಟ್ ಸೇವಾ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಹಿಂದೆ ಹೊಸ ಮೋಟಾರು ಅಳವಡಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಕೂಳಗೆರೆಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನ ಕೆ.ಹೊನ್ನಗೆರೆಯಲ್ಲಿ ಶೀಘ್ರ ಪೊಲೀಸ್ ಠಾಣೆ ನಿರ್ಮಿಸುವ ಸಂಬಂಧ ಗೃಹ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ವಸತಿ ಗೃಹ ನಿರ್ಮಾಣದ ಜತೆಗೆ ಬನ್ನಳ್ಳಿ ಮತ್ತು ಚಿಕ್ಕರಸಿಕೆರೆ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಬೇಸಾಯ ಮಾಡಲು ನೀರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ ಸರ್ಕಾರದಿಂದ ವಿಶೇಷ ಅನುದಾನ ತಂದು ಶಾಶ್ವತ ನೀರಾವರಿ ಯೋಜನೆಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮುಖಂಡರಾದ ಶ್ರೀನಿವಾಸ್ಗೌಡ, ಕೆ.ಎಲ್.ಜಯರಾಮು, ತಿಪ್ಪೂರು ಮನು, ಕೆಂಪರಾಜು, ರಾಜಣ್ಣ, ಯೋಗೇಶ್, ಮಾದೇಶ್, ಸುರೇಶ್, ಕೃಷ್ಣೇಗೌಡ, ಕುಮಾರ್, ಗುಂಡ ಇತರರು ಇದ್ದರು.