ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. 
ಮಂಡ್ಯ

ಸಿದ್ದಯ್ಯನಕೊಪ್ಪಲಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ

ಪ್ರಮುಖ ಮುಖ್ಯಾಂಶಗಳು

  • 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ

ಮಂಡ್ಯ: ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸಿದ್ದಯ್ಯನಕೊಪ್ಪಲು ಗ್ರಾಮದ ಡೇರಿ ಸಮೀಪದ ಗ್ರಾಮ ಪರಿಮಿತಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೆಸ್ಕ್ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ನನೆಗುದಿಗೆ ಬಿದ್ದಿದ್ದ ಸಿದ್ದಯ್ಯನಕೊಪ್ಪಲು ಡೇರಿ ಸಮೀಪದ ರಸ್ತೆಗೆ ಕಾಂಕ್ರೀಟ್ ಹಾಕಲಾಗಿತ್ತು. ಆದರೆ ರಸ್ತೆ ಬೇಗ ಹಾಳಾದ ಕಾರಣ ಹಾಕಿದ್ದ ಕಬ್ಬಿಣಗಳು ಮೇಲಕ್ಕೆ ಎದ್ದು ನಡೆದಾಡಲು ಆಗದಂತಹ ಪರಿಸ್ಥಿತಿ ಇತ್ತು. ಹೀಗಾಗಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಂಡು ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸುವಂತೆ ತಿಳಿಸಿದರು.

ಸೆ.1ರಂದು ಶ್ರೀರಂಗಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ಉದ್ಯೋಗಮೇಳ ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅರ್ಹತೆಗೆ ಸಂಬಂಧಪಟ್ಟಂತೆ ಅನೇಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಬರುತ್ತಿವೆ. ಸ್ಥಳದಲ್ಲೇ 500 ಜನರಿಗೆ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ನಿರುದ್ಯೋಗ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಸ್.ಬಿ.ರಮೇಶ್, ಎಸ್.ಎನ್.ಶಿವಣ್ಣ, ಮುಖಂಡರಾದ ರಘು, ಕ್ಯಾತೇಗೌಡ, ಸುದೀನ್ ಕುಮಾರ್, ಅನಿಲ್ ಕುಮಾರ್, ರಾಮು, ಶ್ರೀನಿವಾಸ್, ನಟೇಶ್, ಕಾಳೇನಹಳ್ಳಿ ಮಂಜುನಾಥ್, ಕೆಂಪರಾಜು, ಸುರೇಶ್, ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅರಕೆರೆ ಸಂತೋಷ್, ಇಂಡುವಾಳು ಗ್ರಾ.ಪಂ. ಪಿಡಿಒ ಮಹೇಶ್ ಸೇರಿದಂತೆ ಇತರರಿದ್ದರು.