ಕೆ.ಎಂ.ದೊಡ್ಡಿಯ ಹಲಗೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ಥರು ಪ್ರತಿಭಟನೆ ನಡೆಸಿದರು.
ಕೆ.ಎಂ.ದೊಡ್ಡಿ: ಮೈಕ್ರೋ ಫೈನಾನ್ಸ್‌ಗಳಿಂದ ದಿನೇ ದಿನೆ ಕಿರುಕುಳ ಹೆಚ್ಚಾಗುತ್ತಿದ್ದು ಸರ್ಕಾರ ಕಡಿವಾಣ ಹಾಕುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ನಡೆಯಿತು.
ಹಲಗೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ವಾಹನ, ಗೃಹ, ವಾಣಿಜ್ಯ ಸಾಲಗಳಿಗೆ ಅಧಿಕ ಬಡ್ಡಿ ವಿಧಿಸಿ ಗ್ರಾಹಕರಿಗೆ ಕಿರುಕುಳ ನೀಡುತ್ತಿವೆ. ನ್ಯಾಯಾಲಯದಲ್ಲಿ ದಾವೆ ಹೂಡಿ ಮನೆ ಹರಾಜು ಮಾಡುವ ಪ್ರಕ್ರಿಯೆ ಸಾಕಷ್ಟು ನಡೆಯುತ್ತಿವೆ. ಸಂಕಷ್ಟಕ್ಕೆ ಸಿಲುಕಿದ ನಂತರ ಅದೆಷ್ಟೋ ಕುಟುಂಬಗಳು ಮಾನಕ್ಕೆ ಹೆದರಿ ಗ್ರಾಮಗಳನ್ನು ತ್ಯಜಿಸುತ್ತಿವೆ. ಆದ್ದರಿಂದ ಸರ್ಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ರೈತ ಮುಖಂಡ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ ಮಾತನಾಡಿ, ಕೃಷಿ ಚಟುವಟಿಕೆ ನಡೆಸುವಾಗ ಅವಘಡಗಳು ಸಂಭವಿಸಿ ರೈತ ಮೃತಪಟ್ಟರೆ ಸರ್ಕಾರ ರೈತ ಸಂಜೀವಿನಿ ಯೋಜನೆಯಡಿ 1 ಲಕ್ಷ ರೂ. ಪರಿಹಾರ ನೀಡುತ್ತಿತ್ತು. 30 ವರ್ಷಗಳ ಹಿಂದೆ ನಿಗದಿ ಮಾಡಿದ ಪರಿಹಾರ ಇನ್ನೂ ಬದಲಾಗಿಲ್ಲ. ಸರ್ಕಾರ ಪರಿಹಾರ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಕೆ.ಜಿ.ಉಮೇಶ್, ಮಲ್ಲೇಶ್, ಪುಟ್ಟಸ್ವಾಮಿ, ಬಿಳಿಯಪ್ಪ, ತಮ್ಮಯ್ಯ, ಮರಲಿಂಗು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ಕಾರ್ಯದರ್ಶಿ ಗಗನಗೌಡ, ಗೌರವಾಧ್ಯಕ್ಷ ಪಟೇಲ್ ಹರೀಶ್, ಎಸ್.ಎಲ್.ಉಮೇಶ್, ವಿ.ಪಿ.ವರದರಾಜು ಹಾಜರಿದ್ದರು.