ಮಂಡ್ಯ ನಗರದ ಡಿಸಿ ಕಚೇರಿ ಎದುರು ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು 
ಮಂಡ್ಯ

ಬಲಗೈ ಸಮುದಾಯಗಳ ಒಕ್ಕೂಟ ಪ್ರತಿಭಟನೆ: ಅನುಸೂಚಿತ ಜಾತಿಗಳ(ಉಪ ವರ್ಗೀಕರಣ)ವಿಧೇಯಕ ತಿರಸ್ಕರಿಸಲು ಆಗ್ರಹ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ
  • ಸಹಾಯಕ ಅಧಿಕಾರಿ ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಕೆ
ಮಂಡ್ಯ: ರಾಜ್ಯ ಸರ್ಕಾರ ಅನುಮೋದನೆಗೆ ಸಲ್ಲಿಸಿರುವ ಅನುಸೂಚಿತ ಜಾತಿಗಳ(ಉಪ ವರ್ಗೀಕರಣ) ವಿಧೇಯಕ (2025) ವನ್ನು ರಾಜ್ಯಪಾಲರು ತಿರಸ್ಕರಿಸಬೇಕೆಂದು ಒತ್ತಾಯಿಸಿ ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಹಾಯಕ ಅಧಿಕಾರಿ ಡಾ.ರೋಹಿಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ವಿಧೇಯಕವನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.
ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಅಥವಾ ಸ್ಥಾನಗಳಲ್ಲಿನ ನೇಮಕಾತಿಯಲ್ಲಿ ಅಥವಾ ಆ ಹುದ್ದೆಗಳಿಗೆ ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯಲ್ಲಿ ಬಾಧಕವನ್ನುಂಟು ಮಾಡತಕ್ಕದ್ದಲ್ಲ ಎಂಬ ಅಂಶವು ಪ್ರಸ್ತುತ ರಾಜ್ಯಸರ್ಕಾರ ಸಿದ್ಧಪಡಿಸಿರುವ ವಿಧೇಯಕದಲ್ಲಿ ಸೇರ್ಪಡೆಯಾಗಿರುವುದಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯತವರು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರನ್ನು ಶೇ.17ರಷ್ಟು ಪ್ರಾತಿನಿಧ್ಯದಲ್ಲಿ ಸೇರಿಸಿ ಲೆಕ್ಕ ಹಾಕುವ ಸಾಧ್ಯತೆ ಇರುತ್ತದೆ. ಇದು ಪ.ಜಾತಿಯವರಿಗೆ ಪೂರಕವಾಗಿಲ್ಲದೇ ಇರುವುದರಿಂದ ತಿರಸ್ಕರಿಸುವುದು ಸೂಕ್ತ ಎಂದು ಒತ್ತಾಯಿಸಿದರು.
ಬಲಗೈ ಸಮುದಾಯಕ್ಕೆ ಸೇರಿದ ಜನಸಂಖ್ಯೆಯನ್ನು ವಿಭಜಿಸಿ ನ್ಯಾ.ನಾಗಮೋಹನ್‌ದಾಸ್ ಅವರು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದು, ವರದಿಯಲ್ಲಿ ಬಲಗೈ ಜಾತಿಯ ಜನಸಂಖ್ಯೆಯನ್ನು 30,08,633 ಮಿತಿಗೊಳಿಸಿರುವುದು. ಬಲಗೈ ಜಾತಿಯ ಒಟ್ಟು ಜನಸಂಖ್ಯೆ ನಾಗಮೋಹನ್‌ದಾಸ್ ಆಯೋಗದ ಪ್ರಕಾರ 36,43,660 ಇರುವಂತೆ ಮೀಸಲಾತಿ ಪ್ರಕರಣವನ್ನು ಪರಿಷ್ಕರಿಸಿದ ನಂತರ ಮಸೂದೆ ಸಿದ್ಧಪಡಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳು, ಬಲಗೈ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರೆ ಸೌಲಭ್ಯ ಪಡೆಯಲು ಮಸೂದೆಯಲ್ಲಿ ಅವಕಾಶ ಕಲ್ಪಿಸದೇ ಇರುವುದು. ಪ್ರಸ್ತುತ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ 19 ಜಾತಿಗಳನ್ನು ಬಲಗೈ ಸಮುದಾಯವೆಂದು ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರ 2025ರ ನ.13ರಂದು ಸೌಲಭ್ಯ ಪಡೆಯಲು ಹೊರಡಿಸಿರುವ ಆದೇಶದಲ್ಲಿ 63 ಜಾತಿಗಳನ್ನು ಬಲಗೈ ಸಮುದಾಯವೆಂದು ಗುರುತಿಸಿದ್ದು, ಈ ಸಮುದಾಯದ ಎಲ್ಲ್ಲ 63 ಜಾತಿಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಮಸೂದೆಯಲ್ಲಿ ಅವಕಾಶ ಕಲ್ಪಿಸಿರುವುದಿಲ್ಲ ಎಂದು ದೂರಿದರು.
ಒಳ ಮೀಸಲಾತಿ ಗೊಂದಲಗಳನ್ನು ಬಗೆಹರಿಸಿ ನ್ಯಾಯಾಲಯದ ಅಡೆತಡೆಗಳನ್ನು ನಿವಾರಣೆಯಾಗುವವರೆಗೆ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಪದ್ಧತಿಯನ್ನು ಮರು ಜಾರಿ ಮಾಡಲು ಸೂಚಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ 2025ನ್ನು ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮುಖಂಡರಾದ ಸುರೇಶ್ ಕಂಠಿ, ನಿತ್ಯಾನಂದ, ಸಾತನೂರು ಜಯರಾಂ, ಪ್ರೊ.ಹುಲ್ಕೆರೆ ಮಹದೇವು, ದೀಪಕ್, ಶ್ರೀಧರ್, ಹರೀಶ್ ಇತರರಿದ್ದರು.
.