ಪಾಂಡವಪುರ ತಾಲೂಕಿನ ಬೇಬಿ ಬೆಟ್ಡದ ಜಾತ್ರಮಹೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳು ಹುಟ್ಡುವ ಹಕ್ಕಿಗಾಗಿ ಆಂದೋಲನ ಬೀದಿ ನಾಟಕ ಕಾರ್ಯಕ್ರಮದಲ್ಲಿ ಡಾ.ದೀಪಿಕಾ ಮಾತನಾಡಿದರು. ಎನ್. ಸಿ. ಶಿವಮ್ಮ, ಹರಿಕೃಷ್ಣ ಇತರರಿದ್ದರು.  
ಮಂಡ್ಯ

ಭ್ರೂಣ ಪತ್ತೆ ಮಾಹಿತಿ ನೀಡಿದರೆ ಬಹುಮಾನ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ದೀಪಿಕಾ ಮಾಹಿತಿ
ಪಾಂಡವಪುರ: ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಎಲ್ಲರೂ ಮುಂದಾಗಬೇಕಿದ್ದು, ಭ್ರೂಣ ಪತ್ತೆ ಮತ್ತು ಹತ್ಯೆಯಂತಹ ಕೃತ್ಯಗಳ ಬಗ್ಗೆ ಮಾಹಿತಿ ನೀಡಿವರಿಗೆ ಸರ್ಕಾರದಿಂದ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ಚಿಕ್ಕಬ್ಯಾಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ದೀಪಿಕಾ ತಿಳಿಸಿದರು.
ತಾಲೂಕಿನ ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದಲ್ಲಿ ಆರೋಗ್ಯ ಇಲಾಖೆ ಹಾಗೂ ವಿಮೋಚನೆ ಮಹಿಳಾ ಹಕ್ಕುಗಳ ವೇದಿಕೆ ಬೆಂಗಳೂರು. ಇವರ ಸಹಯೋಗದಲ್ಲಿ ಹೆಣ್ಣು ಮಕ್ಕಳು ಹುಟ್ಟುವ ಹಕ್ಕಿಗಾಗಿ ಆಂದೋಲನ ಕುರಿತು ಅರುಣೋದಯ ಜಾನಪದ ಕಲಾತಂಡ ಮಂಡ್ಯ, ಇವರು ಶುಕ್ರವಾರ ಪ್ರದರ್ಶಿಸಿದ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ತಾಯಿ, ಹೆಂಡತಿ, ಗೆಳತಿಯಾಗಿ ಬೇಕು. ಆದರೆ ಮಗಳೇಕೆ ಬೇಡ?, ಈ ಮನಸ್ಥಿತಿಯಿಂದಲೇ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡು ಮಕ್ಕಳು 50 ವರ್ಷವಾದರು ಕೂಡ ಮದುವೆಯಾಗದೆ ಉಳಿದಿದ್ದಾರೆ. ಪ್ರಕೃತಿದತ್ತವಾಗಿ ನೋಡುವುದಾದರೆ 1000 ಗಂಡು ಮಕ್ಕಳು ಭೂಮಿ ಮೇಲೆ ಜನಿಸಿ ಬಂದರೆ 1020 ಹೆಣ್ಣುಮಕ್ಕಳು ಭೂಮಿ ಮೇಲೆ ಜನಿಸಿ ಬರಬೇಕು. ಆದರೆ 1000ಕ್ಕಿಂತ ಕಡಿಮೆ ಇರುವುದು ಶೋಚನೀಯವಾಗಿದೆ ಎಂದು ಬೇಸರವ್ಯಕ್ತಪಡಿಸಿದರು.
ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಹೆಣ್ಣು ಮಗಳನ್ನು ಐದು ಜನ ಗಂಡು ಮಕ್ಕಳು ಮದುವೆಯಾಗುವ ಸಂದರ್ಭ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ವ್ಯಾಪ್ತಿಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವಂಥ ಕೃತ್ಯ ನಡೆಯುತ್ತಿದ್ದರೆ, ಅದರ ಬಗ್ಗೆ ಮಾಹಿತಿಯನ್ನು ನೀಡಿ ಬಹುಮಾನ ಪಡೆಯಬಹುದು ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್. ಸಿ. ಶಿವಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಹರಿಕೃಷ್ಣ, ಸಮುದಾಯ ಆರೋಗ್ಯಾಧಿಕಾರಿ ಸುಷ್ಮಾ, ವಿಮೋಚನಾ ಸಂಸ್ಥೆಯ ಇಂಪನಾ, ಕಲಾತಂಡದ ನಾಯಕಿ ಮಂಜುಳಾ ಹಾಗೂ ಕಲಾವಿದರು ಇದ್ದರು.
ನಾಟಕವನ್ನು ವೀಕ್ಷಿಸಿದ ರೈತರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.