ಮದ್ದೂರು ತಾಲೂಕಿನ ಶಿವಾರಗುಡ್ಡದಲ್ಲಿರುವ ನವೋದಯ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಸಂಕಲ್ಪ ಲ್ಯಾಬ್ ಪ್ರಯೋಗಾಲಯ ಹಾಗೂ ಕ್ರೀಡಾಂಗಣದ ವೇದಿಕೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಡಿ.ಸಿ.ತಮ್ಮಣ್ಣ, ರಾಮಚಂದ್ರು ಇದ್ದರು. 
ಮಂಡ್ಯ

ಮದ್ದೂರು ನವೋದಯ ವಿದ್ಯಾಲಯಕ್ಕೆ ಕಾಯಕಲ್ಪ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ
  • 10-15 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ
  • ಸಂಕಲ್ಪ ಲ್ಯಾಬ್, ಕ್ರೀಡಾಂಗಣ ವೇದಿಕೆ ಉದ್ಘಾಟನೆ
ಮದ್ದೂರು: ತಾಲೂಕಿನ ಶಿವಾರಗುಡ್ಡದಲ್ಲಿರುವ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯವನ್ನು ಇಡೀ ರಾಜ್ಯದಲ್ಲಿ ಮಾದರಿ ವಿದ್ಯಾಲಯವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ವಿದ್ಯಾಲಯದಲ್ಲಿ ಶುಕ್ರವಾರ ಕ್ರೀಡಾಂಗಣದ ವೇದಿಕೆ ಮತ್ತು ಸಂಕಲ್ಪ ಲ್ಯಾಬ್ ಉದ್ಘಾಟನೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿದ್ಯಾಲಯಕ್ಕೆ ಅತ್ಯುತ್ತಮ ರೀತಿ ಸೌಕರ್ಯ ಕಲ್ಪಿಸಲಾಗುವುದು. ಅತ್ಯಂತ ತ್ವರಿತವಾಗಿ ಅಧಿಕಾರಿಗಳು ವಿದ್ಯಾಲಯಕ್ಕೆ ಭೇಟಿ ನೀಡಿ ಯಾವ ಯಾವ ಕಾಮಗಾರಿಗಳು ಆಗಬೇಕಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡು ಅದಕ್ಕೆ ಆಗುವ ಖರ್ಚು-ವೆಚ್ಚದ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ವಿದ್ಯಾಲಯದ ಪ್ರಾಂಶುಪಾಲರು ಶಾಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳು, ಸೌಕರ್ಯಗಳ ಕೊರತೆ ಇತ್ಯಾದಿ ಅಂಶಗಳ ಬಗ್ಗೆ ನನ್ನ ಬಳಿ ವಿವರವಾಗಿ ಚರ್ಚಿಸಿದ್ದು, ಇವೆಲ್ಲ ಯೋಜನೆಗಳನ್ನು ಕೈಗೊಳ್ಳಲು ಸುಮಾರು 10 ರಿಂದ 15 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗುವುದು. ಆದಷ್ಟು ಬೇಗ ಕಾಮಗಾರಿಗೆ ಪೂಜೆ ಸಲ್ಲಿಸಿ ಒಂದು ವರ್ಷದೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕಾಮಗಾರಿಗಳ ಉದ್ಘಾಟನೆಯ ದಿನದಂದು ಬಂದು ಮಧ್ಯಾಹ್ನ ಮಕ್ಕಳ ಜತೆ ಊಟ ಮಾಡುವೆ ಎಂದು ಸಚಿವರು ಹೇಳಿದರು.
ಅಪಾಯಕಾರಿ ಕಟ್ಟಡಗಳಲ್ಲಿ ಕಲಿಕೆ:ರಾಜ್ಯದ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಚ್‌ಡಿಕೆ, ಎಷ್ಟೋ ಶಾಲೆಗಳು ಶಿಥಿಲಾವಸ್ಥೆಗೆ ತಲುಪಿವೆ. ಅಪಾಯಕಾರಿ ಕಟ್ಟಡಗಳಲ್ಲಿ ಮಕ್ಕಳು ಕಲಿಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ಕಟುವಾಗಿ ಟೀಕಿಸಿದರು.
ಮೊದಲ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಕೆಲಸವನ್ನು ದೊಡ್ಡಮಟ್ಟದಲ್ಲಿ ಮಾಡಿದ್ದೆ. ಮುಖ್ಯವಾಗಿ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೆ. ಸ್ವಾತಂತ್ರ್ಯ ಬಂದಾಗಿನಿಂದ ರಾಜ್ಯದಲ್ಲಿ ಸ್ಥಾಪನೆಯಾಗಿದ್ದ ಕಾಲೇಜುಗಳ ಸಂಖ್ಯೆ ಕೇವಲ 169. ವಿಜ್ಞಾನ ಮತ್ತು ವಾಣಿಜ್ಯ ಕೋರ್ಸುಗಳೇ ಇರಲಿಲ್ಲ. ನಾನು ಮುಖ್ಯಮಂತ್ರಿಯಾಗಿ ಬಂದ ನಂತರ ಒಂದೇ ವರ್ಷದಲ್ಲಿ 180 ಪ್ರಥಮ ದರ್ಜೆ ಕಾಲೇಜುಗಳು 500ಕ್ಕೂ ಹೆಚ್ಚು ಜೂನಿಯರ್ ಕಾಲೇಜುಗಳು, 1400 ಪ್ರೌಢಶಾಲೆಗಳನ್ನು ಮಂಜೂರು ಮಾಡಿದೆ. ಅಲ್ಲದೆ 56,000 ಬೋಧಕ ಸಿಬ್ಬಂದಿ ನೇಮಕಾತಿ ಮಾಡಲಾಯಿತು. ವ್ಯವಸ್ಥೆ ಸರಿಪಡಿಸುವ ಇಚ್ಛಾಶಕ್ತಿಯಿಂದ ಇಷ್ಟು ದೊಡ್ಡ ಪ್ರಮಾಣದ ಸುಧಾರಣೆಗಳನ್ನು ಕೈಗೊಳ್ಳಲಾಯಿತು. ಆದರೆ ಇಂದಿನ ಸರ್ಕಾರಕ್ಕೆ ಅಂತಹ ಯಾವುದೇ ಇಚ್ಛಾಶಕ್ತಿ ಇಲ್ಲ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
2018ರಲ್ಲಿ ಮತ್ತೊಮ್ಮೆ ನಾನು ಮುಖ್ಯಮಂತ್ರಿಯಾದಾಗ ರಾಜ್ಯಾದ್ಯಂತ 1000 ಪಬ್ಲಿಕ್ ಶಾಲೆಗಳನ್ನು ತೆರೆದೆ. ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಉದ್ದೇಶದಿಂದ ಈ ಶಾಲೆಗಳನ್ನು ಗುಣಾತ್ಮಕವಾಗಿ ಸ್ಥಾಪಿಸಿ ಅಗತ್ಯ ಮೂಲಸೌಕರ್ಗಳನ್ನು ಕಲ್ಪಿಸಲಾಗಿತ್ತು. ಈಗ ಏನಾಗಿದೆ? ವ್ಯಾಸಂಗ ಮಾಡಿ 7ನೇ ತರಗತಿ ಪಾಸ್ ಆಗಿರುವ ಮಕ್ಕಳಿಗೆ 8ನೇ ತರಗತಿಗೆ ಪ್ರವೇಶ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇಷ್ಟು ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಸರ್ಕಾರಕ್ಕೆ ಇವರ ಬಗ್ಗೆ ಚಿಂತೆ ಇಲ್ಲದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನದಲ್ಲಿ ಕೆಲ ಕೋರ್ಸುಗಳು ನಿರುಪಯುಕ್ತ ಎನ್ನುವಂತೆ ಆಗಿದೆ. ಇಂಜಿನಿಯರಿಂಗ್ ಓದಿದ ಮಕ್ಕಳಿಗೆ ಉದ್ಯೋಗ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ಮಕ್ಕಳಿಗೆ ಕೌಶಲಾಧಾರಿತ ಕೋರ್ಸು ಕಲಿಸುವುದು ಮತ್ತು ಉದ್ಯೋಗ ಆಧರಿತ ಶಿಕ್ಷಣವನ್ನು ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕೌಶಲತೆಯನ್ನು ತುಂಬಬೇಕಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಬಲವಾಗಿ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಪ್ರಾಂಶುಪಾಲ ವಿ.ಪ್ರಸಾದ್, ಪಿಟಿಸಿ ಸದಸ್ಯರಾದ ಅಣ್ಣೂರು ಸತೀಶ್, ಅನುಪಮ, ಡಾ.ಬಸವರಾಜು ಬನ್ನೂರು, ಶಿಕ್ಷಕರಾದ ಶುಭಾಷ್ ಚಿನ್ನಕಟ್ಟೆ, ಶಿಕ್ಷಕರಾದ ರಮಾಕುಮಾರಿ, ಅನುಶಾ ಸೇರಿದಂತೆ ಇತರರು ಹಾಜರಿದ್ದರು.