ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದೂರಿನ ಪರಿಶೀಲನೆ ನಡೆಸುತ್ತಿರುವುದು.
- ಸಂಸ್ಥೆಯನ್ನು ಬಲಹೀನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ
- ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದೂರು ಸ್ವೀಕಾರ ಸಮಾರಂಭ
ಮಂಡ್ಯ: ಜಿಲ್ಲೆಯಲ್ಲಿ ನಡೆದ ಎರಡು ದಿನದ ಪ್ರವಾಸದಲ್ಲಿ 256 ಪ್ರಕರಣದ ವಿಚಾರಣೆ ನಡೆಸಿ 124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹಾಗೆಯೇ ನಾನು ಇರುವವವರೆವಿಗೂ ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನನಂತೂ ಬಲಹೀನಗೊಳಿಸಲು ಸಾಧ್ಯವೇ ಇಲ್ಲ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿಯೂ ಕೂಡ ಇಷ್ಟೊಂದು ಪ್ರಕರಣಗಳನ್ನು ಎರಡು ದಿನದಲ್ಲಿ ಮುಗಿಸಲು ಆಗುತ್ತಿರಲಿಲ್ಲ. ಅಷ್ಟು ಕೆಲಸ ಮಾಡಿದ್ದೇನೆ. ಇಷ್ಟಕ್ಕೇ ಮುಗಿದಿಲ್ಲ. ಮತ್ತೆ 6 ತಿಂಗಳಲ್ಲಿ ಬರುತ್ತೇನೆ. ಅಷ್ಟರೊಳಗೆ ಅಧಿಕಾರಿಗಳು ಜಡತ್ವ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಬಾಕಿ ಪ್ರಕರಣಗಳಿಗೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಿರಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎರಡು ದಿನದಲ್ಲಿ 160 ಪ್ರಕರಣಗಳ ಇತ್ಯರ್ಥದ ಗುರಿ ಹಾಕಿಕೊಂಡು ಬಂದಿದ್ದೆ. ಆದರೆ, ನಿರಂತರ ವಿಚಾರಣೆ ಬಳಿಕವೂ 125 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇವರೊಂದಿಗೆ ಮಾತನಾಡಿ ಎದೆ ನೋವು ಬಂದಿದೆ. ಆದರೆ, ನಾನು ಬದುಕಿರುವುದೇ ಜನರಿಗಾಗಿ. ಜನರಿಗೆ ನ್ಯಾಯ ಕೊಡಿಸುವುದಕ್ಕಾಗಿ. ಮಧ್ಯರಾತ್ರಿ 12 ಗಂಟೆಗೆ ಕರೆದರೂ ಬರುತ್ತೇನೆ. ಜನರ ಕೆಲಸ ಮಾಡುತ್ತೇನೆ. ಮುಂದಿನ ತಿಂಗಳು ಜೂನ್‌ಗೆ ನನಗೆ 66 ವರ್ಷವಾಗುತ್ತದೆ. ಜನರಿಗೆ ಅನ್ಯಾಯ ಮಾಡಿ, ನನಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದೇನೆ. ಅನ್ಯಾಯ ಕಂಡರೆ ನನ್ನ ರಕ್ತ ಕುದಿಯುತ್ತದೆ. ಒಮ್ಮೆ ನಿರ್ಧಾರ ಮಾಡಿದ ಮೇಲೆ ನನ್ನ ಮಾತನ್ನು ನಾನೇ ಕೇಳುವುದಿಲ್ಲ. ನ್ಯಾಯದ ಟೇಬಲ್ ಮುಂದೆ ಕುಳಿತಾದ ಆತ್ಮಸಾಕ್ಷಿಯಂತೆ ಕೆಲಸ ಮಾಡುತ್ತೇನೆ. ಮಂಡ್ಯದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್‌ಬಾಬು ಅವರಂತಹ 10 ಜನ ಎಸ್‌ಪಿಗಳು ನನಗೆ ಸಿಕ್ಕರೆ ಇಡೀ ಕರ್ನಾಟಕವನ್ನೇ ಅಲ್ಲಾಡಿಸುತ್ತೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಒಳ್ಳೆಯ ನೀರು, ಕಬ್ಬು ಬೆಳೆ ಇದೆ. ಅದಕ್ಕಾಗಿ ಬಂದದ್ದು ಬರಲಿ ಎಂಬ ಧೋರಣೆ ಮತ್ತು ಜಡತ್ವವು ಕೆಲವು ಅಧಿಕಾರಿಗಳಲ್ಲಿದೆ. ಜನರು ಮತ್ತು ಅಧಿಕಾರಿಗಳು ಲೋಕಾಯುಕ್ತಕ್ಕೆ ಬರುವ ಮುನ್ನ ಲೋಕಾಯುಕ್ತದ ನೀತಿ-ನಿಯಮ, ಕಾಯ್ದೆಗಳ ಬಗ್ಗೆ ಓದಿಕೊಂಡು ಬನ್ನಿ. ದುರುಪಯೋಗಕ್ಕೆ ಅವಕಾಶ ಕೊಡುವುದಿಲ್ಲ. ಕಾನೂನು ಬದ್ಧವಾಗಿ ಆದೇಶ ಮಾಡುತ್ತೇನೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಕೆಲ ಪಿಡಿಒಗಳು ತಾವೇ ಇಒ, ಸಿಇಒಗಳಾಗಿದ್ದಾರೆ. ಅವರಿಗೆ ಯಾರ ಭಯವೂ ಇಲ್ಲದಂತಾಗಿದೆ. ಆದರೆ, ಕಾನೂನಿನ ಭಯ ಇರಬೇಕು. ಆತ್ಮಸಾಕ್ಷಿಗೆ ಹೆದರಬೇಕು. ಜನಪರವಾಗಿ ಕೆಲಸ ಮಾಡಬೇಕು. ಅಂತೆಯೇ ಜಿ.ಪಂ ಅಧಿಕಾರಿಗಳು ಮತ್ತು ಪಿಡಿಒಗಳು ದಕ್ಷತೆಯಿಂದ ಕೆಲಸ ಮಾಡಬೇಕು. ಇದೇ ರೀತಿಯ ನಿರ್ಲಕ್ಷೃ ಮನೋಭಾವದಿಂದ ಕೆಲಸ ಮಾಡಿದರೆ ಸಹಿಸುವುದಿಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಲೋಕಾಯುಕ್ತ ಉಪ ನಿಬಂಧಕ ಅರವಿಂದ್, ಜಿಲ್ಲಾಧಿಕಾರಿ ಡಾ.ಕುಮಾರ, ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್‌ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಇತರರಿದ್ದರು.