ಮಂಡ್ಯದಲ್ಲಿ ಆಯೋಜಿಸಿದ್ದ ಸಂಶೋಧನಾ ಕಮ್ಮಟ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
- ನಗರದಲ್ಲಿ ಸಂಶೋಧನಾ ಕಮ್ಮಟ
- ಹಲವು ಗಣ್ಯರು ಭಾಗಿ
ಮಂಡ್ಯ: ಹತ್ತು ವರ್ಷದಲ್ಲಿ ಕನ್ನಡ ಭಾಷೆ ಇರುವ ಕಡೆ ಸಬಲೀಕರಣಗೊಳಿಸುವ ಬಗೆ ಹೇಗೆ ಎನ್ನುವುದನ್ನು ಯೋಚನೆ ಮಾಡಲಾಗಿ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಕನ್ನಡ ಭಾಷೆಯ ಸಮನ್ವಯ ಸಂಸ್ಕೃತಿ ಕುರಿತ ನೂರು ಪುಸ್ತಕ ತರಲು ಚಿಂತನೆ ಮಾಡಿ, ಅದರಲ್ಲಿ 41 ಪುಸ್ತಕಗಳು ಹದಿನೈದು ದಿನದಲ್ಲಿ ಬಿಡುಗಡೆ ಆಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ನಿತ್ಯಸಚಿವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನದ ‘ಹೊಸ ದಿಕ್ಕಿನೆಡೆಗೆ ಕನ್ನಡ ಸಂಶೋಧನಾ ಕಮ್ಮಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ಜತೆಗೆ ಕನ್ನಡ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರಸ್ತುತದಲ್ಲಿ ದ್ವೇಷ ಭಾಷಣಗಳ ಸಂಖ್ಯೆ ಹೆಚ್ಚುತ್ತಿದೆ. ಜನಗಳನ್ನು ಒಡೆಯುವ ರಾಜಕೀಯ ಜಾಸ್ತಿಯಾಗಿದೆ. ಇದೆಲ್ಲವನ್ನೂ ನೋಡುತ್ತಾ ಕರ್ನಾಟಕ ಚಾರಿತ್ರಿಕವಾಗಿ ಹೇಗೆ ಒಂದಾಗಿತ್ತು?. ಈ ಮಾತು ಸಂಶೋಧನಾ ಕಮ್ಮಟಕ್ಕೆ ಹತ್ತಿರವಾಗಿದೆ. ಕನ್ನಡ ಸಂಸ್ಕೃತಿಯ ಮೂಲ ಗುಣ ಯಾವುದು ಎಂಬುದನ್ನು ಆಳವಾಗಿ ತಳಸ್ಪರ್ಶಿಯವಾಗಿ ಮಾಡುವುದು ಕೂಡ ಇವತ್ತಿನ ಸಂಶೋಧನೆಯ ಅಗತ್ಯದ ಕೆಲಸವಾಗಿದೆ. ಕರ್ನಾಟಕವನ್ನು ದಕ್ಷಿಣ ಭಾರತವೆಂದು ಹೇಳಲಾಗುತ್ತದೆ. ಇದನ್ನು ಯೋಚನೆ ಮಾಡಲೇಬೇಕು ಏಕೆಂದರೆ ನಾವು ಸಂಪೂರ್ಣವಾಗಿ ದಕ್ಷಿಣ ಕರ್ನಾಟಕದವರಾ, ಬೀದರ್‌ನಿಂದ ಚಾಮರಾಜವರೆಗಿನ ಕರ್ನಾಟಕದ ಉದ್ದ 680 ಕಿ.ಮೀ, ಚಾಮರಾಜನಗರದಿಂದ ಕನ್ಯಾಕುಮಾರಿ ವರೆಗಿನ ಭೂಸ್ಥಳದ ಉದ್ದ 600 ಕಿ.ಮೀ, ಅಂದರೆ ಕಾವೇರಿ ನದಿಯ ದಕ್ಷಿಣಕ್ಕೆ ಇನ್ನೊಂದು ಕರ್ನಾಟಕ ಹಿಡಿಯುವಷ್ಟು ದೊಡ್ಡ ಜಾಗವಿದೆ. ತಮಿಳುನಾಡು, ಕೇರಳ ಕೊನೆಯಾಗುವುದು ಕನ್ಯಾಕುಮಾರಿಯಲ್ಲಿ ಆದರೆ ಕರ್ನಾಟಕ ಕೊನೆಯಾಗವುದು ಮಾತ್ರ ಕಾವೇರಿ ನದಿಯಲ್ಲಿ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಸ್ಕೃತಿ ಎಂಬುದು ಕೇರಳ, ತಮಿಳುನಾಡಿನ, ತೆಲಂಗಾಣದ, ಆಂಧ್ರದ, ಮಹಾರಾಷ್ಟ್ರದ ಹಾಗೂ ಉತ್ತರ ಭಾರತದ ಯಾವುದೇ ರಾಜ್ಯಗಳಿಗಿಂತ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಂಡರೆ, ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿಸುವುದು ನಮ್ಮ ಸಂಶೋಧನೆಯ ದೊಡ್ಡ ಕೆಲಸವಾಗಿದೆ ಎನ್ನಬಹುದು. ಉದಾಹರಣಗೆ ಬೌದ್ಧ ಧರ್ಮ ಬಿಹಾರದಲ್ಲಿದೆ. ಅಲ್ಲಿಂದ ದಕ್ಷಿಣ ಭಾರತಕ್ಕೆ ಬಂದ ಸನ್ನತಿ ದೇಶದ ಎರಡನೇ ಬಹುದೊಡ್ಡ ಕೇಂದ್ರವಾಗಿ ಬೆಳೆಯಿತು ಎಂದು ವಿಶ್ಲೇಷಿಸಿದರು.
ಹಿರಿಯ ವಿದ್ವಾಂಸ ಡಾ.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಸಹ ಪ್ರಾಧ್ಯಾಪಕಿ ಡಾ.ಕೆಂಪಮ್ಮ ಭಾಗವಹಿಸಿದ್ದರು.
ಮೊದಲ ಗೋಷ್ಠಿಯಲ್ಲಿ ’ಸಂಶೋಧನೆ: ತಾತ್ವಿಕತೆ, ಸ್ವರೂಪ’ ಕುರಿತು ಕುವೆಂಪು ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ.ಜಿ.ಪ್ರಶಾಂತನಾಯಕ ಮತ್ತು ತುಮಕೂರು ವಿವಿ ಕುಲಸಚಿವ ಪ್ರೊ.ಮೋಹನ ಚಂದ್ರಗುತ್ತಿ ವಿಷಯ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ’ಕನ್ನಡ ಸಂಶೋಧನೆ: ಹಿನ್ನೋಟ’ ಕುರಿತು ಬೆಂಗಳೂರು ನಿವೃತ್ತ ಪ್ರಾಧ್ಯಾಪಕಿ ಎನ್.ಆರ್.ಲಲಿತಾಂಬ, ಮೈಸೂರು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಕುಲಸಚಿವ(ಪರೀಕ್ಷಾಂಗ) ಪ್ರೊ.ಎಂ.ಜಿ.ಮಂಜುನಾಥ್ ವಿಷಯ ಮಂಡಿಸಿದರು.