ಶ್ರೀರಂಗಪಟ್ಟಣದ ವೆಲ್ಲೆಸ್ಲೀ ಹಳೇ ಸೇತುವೆಯ ಮೇಲಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವನಿತಾರನ್ನು ಪೊಲೀಸ್ ಸಿಬ್ಬಂದಿಯ ಮಾಹಿತಿ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ಮೋಟಾರು ಬೋಟ್ ಬಳಸಿ ನೀರಿನಿಂದ ಜೀವಂತ ಹೊರತೆಗೆದು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. 
ಮಂಡ್ಯ

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ನದಿಗೆ ಹಾರಿದವರನ್ನು ಬದುಕಿಸಿದ ಅಗ್ನಿಶಾಮಕ ಸಿಬ್ಬಂದಿ
ಶ್ರೀರಂಗಪಟ್ಟಣ: ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಹೊರತಂದು ರಕ್ಷಿಸಿದ್ದಾರೆ.
ಮೂಲತಃ ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯ ನಾಗಲಗೆರೆ ಗ್ರಾಮದ ನಿವಾಸಿ ವನಿತಾ (37) ನದಿಗೆ ಹಾರಿದ ಮಹಿಳೆ. ಕೌಟುಂಬಿಕ ಕಲಹದಿಂದ ಮನನೊಂದಿದ್ದ ಅವರು ತವರು ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದರು. ಗುರುವಾರ ಬೆಳಗ್ಗೆ ಪಟ್ಟಣದ ವೆಲ್ಲೆಸ್ಲಿ ಹಳೇ ಸೇತುವೆಯ ಮೇಲಿಂದ ನದಿಗೆ ಹಾರಿದ್ದು, ಮುಳುಗುತ್ತಿರುವುದನ್ನು ಜನರು ಗುಂಪು ಕಟ್ಟಿಕೊಂಡು ನೋಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಅಭಿ ಇದನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ತುರ್ತಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅನಂತ್, ವೆಂಕಟೇಶ್ ಹಾಗೂ ವಿಶ್ವಾಸ್ ಕಾರ್ಯಪ್ರವೃತ್ತರಾಗಿ ಮೋಟಾರ್ ಬೋಟ್ ಬಳಸಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿ ತೀರಕ್ಕೆ ಕರೆತಂದರು. ಬಳಿಕ ಅಧಿಕವಾಗಿ ನೀರು ಕುಡಿದು ಅಸ್ವಸ್ಥಗೊಂಡಿದ್ದ ಅವರನ್ನು ತುರ್ತು ಚಿಕಿತ್ಸೆಗಾಗಿ ಅಗ್ನಿಶಾಮಕ ವಾಹನದಲ್ಲೇ ಚಾಲಕ ಬಸವರಾಜ್ ಅಂಗಡಿ ಸಹಕಾರದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದಾರೆ.
ಪ್ರಥಮ ಚಿಕಿತ್ಸೆ ಬಳಿಕ ವನಿತಾರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.