ಡಿ.ಹಲಸಹಳ್ಳಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಎಂಡಿಸಿಸಿ ಬ್ಯಾಂಕ್ ಮಳವಳ್ಳಿ ಶಾಖೆ ಮೇಲ್ವಿಚಾರಕ ಎಚ್.ಪುಟ್ಟರಾಜು ಮಾತನಾಡಿದರು. ಕೆ.ಗೀತಾ, ಜಯರಾಮೇಗೌಡ, ಎಚ್.ಸಿದ್ದಾಚಾರಿ, ಡಿ.ಎಫ್.ಫಾರೂಕ್ ಪಾಷಾ, ಸಿ.ದೊಡ್ಡಸ್ವಾಮಿ, ಮಾದಪ್ಪ, ನಾಗರಾಜು ಇತರರು ಇದ್ದರು. 
ಮಂಡ್ಯ

ಸಾಲ ಮರುಪಾವತಿಸಿ ಅಭಿವೃದ್ಧಿಗೆ ಸಹಕರಿಸಿ

ಲೋಕೇಶ್ ಮನು. ಡಿ
ಹಲಗೂರು: ಸಹಕಾರ ಸಂಘದ ಸದಸ್ಯರು ಸಂಘದಿಂದ ಸಾಲ ಪಡೆದು, ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಡಿ.ಹಲಸಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಾಣಸಮುದ್ರ ಶ್ರೀಧರ್ ಸಲಹೆೆ ನೀಡಿದರು.
ಹಲಗೂರು ಸಮೀಪದ ಡಿ.ಹಲಸಹಳ್ಳಿಯಲ್ಲಿ ಗುರುವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದಲ್ಲಿ 2,764 ಸದಸ್ಯರಿದ್ದು, ಅರ್ಹರಿಗೆ 14.9 ಕೋಟಿ ರೂ. ಬೆಳೆ ಸಾಲ ಮತ್ತು 5.95 ಕೋಟಿ ರೂ. ಎಂಟಿಎಲ್ ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಸಂಘವು ಕಳೆದ ಸಾಲಿನಲ್ಲಿ 12 ಲಕ್ಷ ರೂ. ನಿವ್ಹಳ ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ 35 ಲಕ್ಷ ರೂ. ಬಜೆಟ್ ಗುರಿ ಹೊಂದಿಗಿದೆ ಎಂದು ಮಾಹಿತಿ ನೀಡಿದರು.
ಎಂಡಿಸಿಸಿ ಬ್ಯಾಂಕ್ ಮಳವಳ್ಳಿ ಶಾಖೆ ಮೇಲ್ವಿಚಾರಕ ಎಚ್.ಪುಟ್ಟರಾಜು ಮಾತನಾಡಿ, ಜೂ. 1, 2026ರಿಂದ ಸಂಘದ ಎಲ್ಲ ವ್ಯವಹಾರಗಳು ಡಿಜಿಟಲೀಕರಣಗೊಂಡಿದ್ದು, ಆನ್‌ಲೈನ್ ವ್ಯವಹಾರ ಚಾಲ್ತಿಯಲ್ಲಿದೆ. ಹಾಗಾಗಿ ನಿಗದಿತ ಸಮಯದಲ್ಲಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಕೆ.ಗೀತಾ, ನಿರ್ದೇಶಕರಾದ ಜಯರಾಮೇಗೌಡ, ಎಚ್.ಸಿದ್ದಾಚಾರಿ, ಡಿ.ಎಫ್.ಫಾರೂಕ್ ಪಾಷಾ, ಸಿ.ದೊಡ್ಡಸ್ವಾಮಿ, ಮಾದಪ್ಪ, ನಾಗರಾಜು, ಮೇಲ್ವಿಚಾರಕ ಎಚ್.ಪುಟ್ಟರಾಜು, ಕಾರ್ಯದರ್ಶಿ ಡಿ.ವಿ.ರವಿಚಂದ್ರ, ಅಕೌಂಟೆಂಟ್ ಪಿ.ಮಧು, ವ್ಯವಸ್ಥಾಪಕ ರಾಚಯ್ಯ ಭಾಗವಹಿಸಿದ್ದರು.