ಮಂಡ್ಯ ನಗರದ ಕೆಂಪೇಗೌಡ(ಬನ್ನೂರು) ರಸ್ತೆಯಲ್ಲಿ ನವೀಕೃತಗೊಂಡ ವೃತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಿದರು.
- ನಗರದ ಕೆಂಪೇಗೌಡ ರಸ್ತೆ ಲೋಕಾರ್ಪಣೆ
- ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವರು ಭಾಗಿ
ಮಂಡ್ಯ: ಕೈಗಾರಿಕೆ ಸ್ಥಾಪನೆಗೆ ನೂರು ಎಕರೆ ಜಾಗ ಬೇಕೆಂದು ಕೇಳಿದರು. ಅಷ್ಟು ಪ್ರಮಾಣದ ಜಾಗ ಕೊಟ್ಟೆ. ಆದರೀಗ ಐದು ನೂರು ಎಕರೆ ಬೇಕೆನ್ನುತ್ತಾರೆ. ಮಂಡ್ಯಕ್ಕೆ ನಾನೇ ಕಾರ್ಖಾನೆ ತರುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಪಿ.ರವಿಕುಮಾರ್ ಗಣಿಗ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದ ಕೆಂಪೇಗೌಡ(ಬನ್ನೂರು) ರಸ್ತೆಯಲ್ಲಿ ನವೀಕೃತಗೊಂಡ ವೃತ್ತವನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನೊಂದು ತಿಂಗಳಲ್ಲಿ ಅಮೆರಿಕಾ ಮೂಲಕ ಸಾಫ್ಟ್‌ವೇರ್ ಕಂಪನಿ ಮಂಡ್ಯ ನಗರಕ್ಕೆ ಬರಲಿದೆ. ಈ ಸಂಬಂಧ ಆ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮಂಡ್ಯದ ಇಂಜಿನಿಯರ್‌ಗಳಿಗೆ ಇಲ್ಲಿಯೇ ಉದ್ಯೋಗ ಕೊಡಿಸುತ್ತೇವೆ. ನಮಗೆ ಕೆಲಸ ಮಾಡುವುದಷ್ಟೇ ಗೊತ್ತೇ ಹೊರತು ಬೇರೆನೂ ಗೊತ್ತಿಲ್ಲ ಎಂದರು.
ಮಂಡ್ಯ ನಗರದಲ್ಲಿ ಅಂದಾಜು 200 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಕೆಂಪೇಗೌಡ(ಬನ್ನೂರು) ರಸ್ತೆಯಲ್ಲಿ ವೃತ್ತ ನವೀಕೃತಗೊಳಿಸುವ ಕೆಲಸ ಮೂರು ತಿಂಗಳು ನಡೆಯಿತು. ಈವರೆಗೆ ಈ ಭಾಗದ ಜನರು ತಾಳ್ಮೆಯಿಂದ ಸಹಕರಿಸಿದ್ದೀರಿ. ಅದೇ ರೀತಿ ಎಲ್ಲರೂ ಖುಷಿಪಡುವಂತಹ ಕೆಲಸ ಮಾಡಿದ್ದೇವೆ. ನಿರಂತರ ಪರಿಶೀಲನೆ ಮಾಡುವ ಜತೆಗೆ ಇಂತಹ ಮಾದರಿಯಲ್ಲಿಯೇ ಕಾಮಗಾರಿ ಆಗಬೇಕೆಂದು ಸೂಚನೆ ಕೊಟ್ಟು ಮಾಡಿಸಲಾಗಿದೆ. ಅದೇ ರೀತಿಯಾಗಿದೆ. ಈ ವೃತ್ತಕ್ಕೆ ಹೊಸ ರೂಪ ನೀಡಲಾಗಿದೆ ಎಂದು ಹೇಳಿದರು.
ಇನ್ನು ಚಾಮುಂಡೇಶ್ವರಿ ದೇವಸ್ಥಾನದಿಂದ ಕ್ಷೇತ್ರದ ಕೊನೆ ಭಾಗದವರೆಗಿನ ರಸ್ತೆಯನ್ನು 3 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಡಾ.ಬೆಸಗರಹಳ್ಳಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಆರು ಕೋಟಿ ರೂ ವೆಚ್ಚದಲ್ಲಿ ಸೈಕಲ್ ಬೇ ಮಾಡಲಾಗುವುದು. 10 ಕೋಟಿ ರೂ ವೆಚ್ಚದಲ್ಲಿ ಹೊಸಹಳ್ಳಿ ವೃತ್ತ ಹಾಗೂ ಫ್ಯಾಕ್ಟರಿ ವೃತ್ತವನ್ನು ವಿದೇಶಿ ಮಾದರಿ ಅಭಿವೃದ್ಧಿ ಮಾಡಲಾಗುವುದು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಎರಡೂವರೆ ಕೋಟಿ ರೂ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಲೋಕಾರ್ಪಣೆಗೊಳಿಸಲಾಗುವುದು. ಹೊಳಲು ವೃತ್ತವನ್ನು ಸಧ್ಯಕ್ಕೆ 40 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಇನ್ನೂ 40 ಲಕ್ಷ ರೂ ವ್ಯಯಿಸಿ ಹೊಸ ರೂಪ ಕೊಡುತ್ತೇವೆ. ಮೂರನೇ ವಾರ್ಡ್‌ನಲ್ಲಿ ಮಳೆ ಬಂದರೆ ಮನೆ ತುಂಬ ನೀರು ತುಂಬಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ 20 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ ಆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.
ಉದ್ಯಾನಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಮಂಡ್ಯ ನಗರದ ಕೊಳಚೆ ನೀರು ಗುತ್ತಲು ಕರೆ ಸೇರುತ್ತಿತ್ತು. ಈಗ ಅದನ್ನು ತಪ್ಪಿಸಲು ಯೋಜನೆಗೆ ಚಾಲನೆ ನೀಡಲಾಗಿದೆ. ಮುಂದೆ ಕೆರೆ ಸುತ್ತ ವಾಯುವಿಹಾರಕ್ಕೆ ಅವಕಾಶವಾಗುವಂತೆ ಯೋಜನೆ ಅನುಷ್ಠಾನ ಮಾಡಲಾಗುವುದು. ಹಲವು ದಶಕದಿಂದ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದವರ ನೋವಿಗೆ ಸ್ಪಂದಿಸಲಾಗಿದೆ. ಈಗಾಗಲೇ ಕೆಲವರಿಗೆ ವಿತರಣೆ ಮಾಡಲಾಗಿದ್ದು, ಉಳಿದವರಿಗೆ ನೀಡಲು ಸಿಎಂ ಅವರ ದಿನಾಂಕ ಕೇಳಿದ್ದೇವೆ. 200 ಕೋಟಿ ರೂ ವೆಚ್ಚದಲ್ಲಿ ನಾಲೆಗಳ ಅಭಿವೃದ್ಧಿಯಾಗುತ್ತಿದೆ. ನಮ್ಮ ಸರ್ಕಾರ ಅನುದಾನ ಕೊಡುತ್ತಿದೆ. ಗ್ಯಾರಂಟಿ ಯೋಜನೆಯನ್ನು ನೀಡುತ್ತಿದೆ. ಕೆಲಸ ಮಾಡುವ ಇಚ್ಛಾಸಕ್ತಿ ನಮಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರುದ್ರಪ್ಪ, ಮುಡಾ ಮಾಜಿ ಅಧ್ಯಕ್ಷ ನಹೀಂ ಇತರರಿದ್ದರು.
ಮಂಡ್ಯ ನಗರದ ವಿ.ವಿ ರಸ್ತೆಯನ್ನು ವಾಹನ ಮುಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ. ಆರು ಕೋಟಿ ರೂ ವೆಚ್ಚದಲ್ಲಿ ಹೊಸ ರೂಪ ನೀಡಲಾಗುವುದು. ಇದಲ್ಲದೆ ಆಟೋ ಚಾಲಕರು, ಬಡವರಿಗೆ ನೀಡಲು ಒಂದು ಸಾವಿರ ಮನೆ ಹಾಲಹಳ್ಳಿಯಲ್ಲಿ ನಿರ್ಮಾಣ ಮಾಡಲಾಗುವುದು.