ಮದ್ದೂರು ನಗರದ ಹೊಸ ಕೊಪ್ಪ ಸರ್ಕಲ್ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘ (ಮೂಲ ಬಣದ)ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಚ್.ಎಸ್.ಪ್ರಭುಲಿಂಗು, ಸೊ.ಶಿ.ಪ್ರಕಾಶ್, ಅಣ್ಣೂರು ಮಹೇಂದ್ರ, ಜಗಣ್ಣ, ರಾಮಸ್ವಾಮಿ, ರಾಮಲಿಂಗೇಗೌಡ ಇದ್ದರು. 
ಮಂಡ್ಯ

ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ನೀರು ಹರಿಸಿ

ಲಲಾಟಾಕ್ಷ ಎಸ್
ಮದ್ದೂರು: ಕೆಆರ್‌ಎಸ್ ಅಣೆಕಟ್ಟೆಯಿಂದ ಒಣಗಿರುವ ಬೆಳೆಗಳಿಗೆ ವಿಶ್ವೇಶ್ವರಯ್ಯ ನಾಲೆಗಳ ಮೂಲಕ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ (ಮೂಲ ಬಣದ)ದಿಂದ ನಗರದ ಹೊಸಕೊಪ್ಪ ಸರ್ಕಲ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಬೆಳೆ ಒಣಗುತ್ತಿದ್ದರೂ ಕೆಆರ್‌ಎಸ್‌ನಿಂದ ನೀರು ಹರಿಸದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದ ಕಾರಣ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಭುಲಿಂಗು ಮಾತನಾಡಿ. ಈಗಾಗಲೇ ಮಳೆ ಅಭಾವ ಹಾಗೂ ಕೆಆರ್‌ಎಸ್‌ನಿಂದ ನೀರು ಹರಿಸದ ಪರಿಣಾಮ ಬೆಳೆಗಳು ಒಣಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಕಟ್ಟೆಯಿಂದ ನೀರು ಹರಿಸದಿದ್ದರೆ ಮತ್ತಷ್ಟು ಬೆಳೆ ಒಣಗಿ ಅಧಿಕ ನಷ್ಟವಾಗಲಿದೆ.
ಕೂಡಲೇ ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ನೀರು ಹರಿಸಬೇಕು. ಸಂಪೂರ್ಣ ಒಣಗಿರುವ ಬೆಳೆಗಳಿಗೆ ಎಕರೆಗೆ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ನೀಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಕಬ್ಬು, ರಾಗಿ, ಬಾಳೆ, ತೆಂಗು, ಅಡಿಕೆ, ರೇಷ್ಮೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿ ತಲುಪಿದೆ. ಸರ್ಕಾರ ಕೂಡಲೇ ವೈಜ್ಞಾನಿಕ ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿದರು.
ರೈತರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಸಂಬಂಧಿಸಿದವರೊಂದಿಗೆ ಚರ್ಚಿಸಿ ನಾಲೆಗಳಿಗೆ ನೀರು ಹರಿಸಿ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಸೊ.ಶಿ.ಪ್ರಕಾಶ್, ಅಣ್ಣೂರು ಮಹೇಂದ್ರ, ಜಗಣ್ಣ, ರಾಮಸ್ವಾಮಿ, ರಾಮಲಿಂಗೇಗೌಡ, ಪಿ.ವೆಂಕಟೇಶ್, ಶಿವರಾಮು ಇತರರು ಇದ್ದರು.