ಮಂಡ್ಯ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನ-ಭಾರತೀಯರ ಹಕ್ಕುಗಳು ಮತ್ತು ಕರ್ತವ್ಯಗಳು ಪುಸ್ತಕ ಬಿಡುಗಡೆ ಮಾಡಲಾಯಿತು.
- ಭಾರತೀಯ ಸಂವಿಧಾನ-ಭಾರತೀಯರ ಹಕ್ಕುಗಳು ಮತ್ತು ಕರ್ತವ್ಯಗಳು ಪುಸ್ತಕ ಬಿಡುಗಡೆ
- ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜನೆ
ಮಂಡ್ಯ: ಭವಿಷ್ಯದ ಯುವ ಪೀಳಿಗೆಗೆ ಸಂವಿಧಾನ ಹಾಗೂ ಭಾರತೀಯರಿಗೆ ಕೊಡಮಾಡುವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಹೇಶ್ ಇರಸವಾಡಿ ಅವರ ಬರೆದಿರುವ ‘ಭಾರತೀಯ ಸಂವಿಧಾನ-ಭಾರತೀಯರ ಹಕ್ಕುಗಳು ಮತ್ತು ಕರ್ತವ್ಯಗಳು’ ಪುಸ್ತಕ ಸಮಗ್ರ ಮಾಹಿತಿ ನೀಡಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಾಂಕೇತಿಕವಾಗಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವ ಸಮೂಹಕ್ಕೆ ಶಾಲೆ ಮತ್ತು ಕಾಲೇಜು ಹಂತದಲ್ಲೇ ಸಂವಿಧಾನದ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ. ಈ ನಿಟ್ಟಿನಲ್ಲಿ ಭಾಷೆ ಸರಳೀಕರಣಗೊಳಿಸಿ ಬರೆದಿರುವ ಪುಸ್ತಕ ವಿದ್ಯಾರ್ಥಿಗಳಿಗೆ ಸಹಕಾರವಾಗಲಿದೆ ಎಂದು ಹೇಳಿದರು.
ಮೈಸೂರು ಪರಿವರ್ತನಾ ಸಂಸ್ಥೆ ಕಾರ್ಯದರ್ಶಿ ಎಚ್.ಎಂ.ಸತೀಶ್ ಮಾತನಾಡಿ, ಕಳೆದ 3 ತಿಂಗಳಿಂದ ಪುಸ್ತಕದ ಪ್ರತಿಗಳನ್ನು ಮಂಡ್ಯ, ಮೈಸೂರು ಹಾಗೂ ಚಾಮರಾಜನಗರಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ 1000, ಮೈಸೂರಿನಲ್ಲಿ 3000 ಸಾವಿರ ವಿತರಣೆ ಮಾಡಿದ್ದು, 3 ಜಿಲ್ಲೆಗಳಲ್ಲಿ ತಲಾ 20,000 ಕೃತಿಗಳನ್ನು ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಸಂವಿಧಾನಕ್ಕೆ ಸಂಬಂಧಿಸಿದಂತೆ ಮೂರು ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಆಯೋಜಿಸಲಾಗುವುದು ಎಂದರು.
ಎಂ.ಎಂ.ಫೌಂಡೇಷನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ, ಎಂ.ಬಿ.ನಾಗಣ್ಣಗೌಡ, ಕೊಮ್ಮೇರಹಳ್ಳಿ ಕೃಷ್ಣಮೂರ್ತಿ, ಮಹೇಶ್ ಇರಸವಾಡಿ ಇತರರಿದ್ದರು.