ಮಂಡ್ಯದ ಕಾಳಿಕಾಂಭ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.
ರಾಜ್ಯಸರ್ಕಾರ ಆರಂಭಿಸಲಿರುವ ಭಾರತ್ ಜೋಡೋ ಸಂಘಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹವನ್ನು ನೋಂದಾಯಿಸುವುದರಿಂದ ಪಕ್ಷ ಸಂಘಟನೆಯೂ ಆಗಲಿದೆ. ಕಾರ್ಯಕರ್ತರು ಸಂಘಗಳಿಗೆ ನಾಯಕರಾಗಿ ಬೆಳವಣಿಗೆ ಕಾಣಬಹುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಸಲಹೆ ನೀಡಿದರು.
ನಗರದ ಹೊಸಹಳ್ಳಿ ಬಡಾವಣೆಯಲ್ಲಿ ಆಯೋಜಿಸಿದ್ದ ವಾರ್ಡ್ ನಂ.12 ರಿಂದ 24ರವರೆಗೆ ಭಾರತ್ ಜೋಡೋ ಸಂಘಕ್ಕೆ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕ-ಯುವತಿಯರನ್ನು ಪಕ್ಷದತ್ತ ಸೆಳೆಯುವುದಕ್ಕೆ ಇದೊಂದು ಸದಾವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿದಷ್ಟು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಬಹುದು. ಹತ್ತು ಲಕ್ಷ ರೂ. ಸಂಘಗಳಿಗೆ ಸಿಗುತ್ತದೆ. ಜತೆಗೆ ವೇತನವನ್ನೂ ಪಡೆಯಬಹುದು. ಹೆಚ್ಚು ಸಂಖ್ಯೆಯಲ್ಲಿ ಯುವ ಸಮೂಹವನ್ನು ನೋಂದಣಿ ಮಾಡಿದರೆ ಕಾರ್ಯಕರ್ತರು ರಾಜಕೀಯವಾಗಿಯೂ ಬೆಳವಣಿಗೆ ಕಾಣಬಹುದು ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಸಂಘಟನೆಗೆ ಸದಸ್ಯತ್ವ ಮಾಡದಿದ್ದರೆ ವಿರೋಧ ಪಕ್ಷದವರು ಅದರ ಲಾಭ ಪಡೆದು ಸಂಘದ ಅಧ್ಯಕ್ಷರಾಗಬಹುದು. ಇದು ಸರ್ಕಾರದ ಯೋಜನೆಯಾಗಿರುವುದರಿಂದ ಯಾರು ಏನು ಬೇಕಾದರೂ ಆಗಬಹುದು. ಆ ಅವಕಾಶವನ್ನು ಕಾರ್ಯಕರ್ತರೇ ಪಡೆಯಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಹೇಳಿದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕರಡು ಪಟ್ಟಿ ಬಿಡುಗಡೆಯಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 37,981 ಜನರನ್ನು ಕೈಬಿಡಲಾಗಿದೆ. ಇನ್ನೂ 25 ಸಾವಿರ ಜನರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈಗ ನಮಗೆ ನಿಜವಾದ ಸವಾಲು ಎದುರಾಗಿದೆ. ಈ 25 ಸಾವಿರ ಜನರು ಕೈಬಿಟ್ಟು ಹೋಗದಂತೆ ಉಳಿಸಿಕೊಳ್ಳುವುದಕ್ಕೆ ನಾವೆಲ್ಲರೂ ಪಣ ತೊಡಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಕೀಲಾರ ರಾಧಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ನಗರಸಭೆ ಮಾಜಿ ಅಧ್ಯಕ್ಷೆ ಹನ್ಸಿಯಾಬಾನು, ಮಾಜಿ ಸದಸ್ಯರಾದ ರವಿ, ಶ್ರೀಧರ್, ಹರೀಶ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಎಚ್.ಬಿ.ಶುಭದಾಯಿನಿ, ಮುಖಂಡರಾದ ರುದ್ರಪ್ಪ, ಪಲ್ಲವಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಲಿಂಗೇಗೌಡ, ಕಮಲಾರಾಜು, ಹೊಸಹಳ್ಳಿ ನಾಗೇಶ್ ಇತರರಿದ್ದರು.