ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ ಇತರರಿದ್ದರು. 
ಮಂಡ್ಯ

ಭತ್ತ-ರಾಗಿ ಖರೀದಿಗೆ ನೋಂದಣಿ ಅವಧಿ ವಿಸ್ತರಣೆ: ಯಾವಾಗ ಕೊನೇ ದಿನ ಎಂಬ ಮಾಹಿತಿ ಇಲ್ಲಿದೆ..! Registration period for paddy-millet purchase extended

ಪ್ರಮುಖ ಮುಖ್ಯಾಂಶಗಳು

  • ಭತ್ತ-ರಾಗಿ ಖರೀದಿಗೆ ನೋಂದಣಿ ಅವಧಿ ವಿಸ್ತರಣೆ
  • ಕನಿಷ್ಟ ಬೆಂಬಲ ಬೆಲೆ ಯೋಜನೆ
  • ಜಿಲ್ಲೆಯಲ್ಲಿ 17 ಕೇಂದ್ರ ಓಪನ್
ಮಂಡ್ಯ: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಭತ್ತ ಮತ್ತು ರಾಗಿ ಖರೀದಿಗೆ ಸಮಯಾವಕಾಶ ವಿಸ್ತರಿಸಲಾಗಿದೆ. ಅದರಂತೆ ಭತ್ತ ಖರೀದಿಗೆ ಡಿ.31 ಹಾಗೂ ರಾಗಿ ಖರೀದಿಗೆ ಡಿ.15 ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2025-26 ನೇ ಸಾಲಿನ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಾಗೂ 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಕೊಬ್ಬರಿ ಸರಬರಾಜು ಮಾಡಿದ ರೈತರಿಗೆ ಹಣ ಪಾವತಿಸಲು ಬಾಕಿಯಿರುವ ಸಂಬಂಧ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
2025-26ನೇ ಸಾಲಿಗೆ ಸಂಬಂಧಪಟ್ಟಂತೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ನೋಂದಣಿಗಾಗಿ ಜಿಲ್ಲೆಯಲ್ಲಿ 17 ಕೇಂದ್ರ ತೆರೆಯಲಾಗಿದೆ. ರೈತರು ನೇರವಾಗಿ ಕೇಂದ್ರಗಳಲ್ಲಿ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಈವರೆಗೂ ಭತ್ತ ಖರೀದಿಗಾಗಿ 182 ರೈತರು 5,953.00 ಕ್ವಿಂಟಾಲ್ ಪ್ರಮಾಣದಲ್ಲಿ ಭತ್ತಕ್ಕೆ ನೋಂದಾಯಿಸಿಕೊಂಡಿರುತ್ತಾರೆ. ರಾಗಿ ಖರೀದಿಗಾಗಿ 13,047 ರೈತರು 3,08,666 ಕ್ವಿಂಟಾಲ್ ಪ್ರಮಾಣದ ರಾಗಿಗೆ ನೋಂದಾಯಿಸಿಕೊಂಡಿರುತ್ತಾರೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ ಮತ್ತು ರಾಗಿ ಖರೀದಿಸಲು ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 2,369 ರೂ., ಗ್ರೇಡ್-ಎ ಭತ್ತಕ್ಕೆ 2,389 ರೂ. ಹಾಗೂ ರಾಗಿ ಪ್ರತಿ ಕ್ವಿಂಟಾಲ್‌ಗೆ 4,886 ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಕಬ್ಬು ಸರಬರಾಜು ಮಾಡುವ ರೈತರಿಗೆ ಹಣವನ್ನು ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿಸುವುದು ಕಡ್ಡಾಯ. ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನದೊಳಗೆ ಹಣ ಪಾವತಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಕೊಬ್ಬರಿ ಪೂರೈಕೆ ಮಾಡಿದ ರೈತರಿಗೆ ಬಾಕಿಯಿರುವ ಪಾವತಿ ಹಣವನ್ನು ಶೀಘ್ರದಲ್ಲೇ ಪಾವತಿಸಬೇಕು ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ ಇತರರಿದ್ದರು.