ಮದ್ದೂರು ತಾಲೂಕಿನ ಕೆಸ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಬಿಇಒ ಧನಂಜಯ ಉದ್ಘಾಟಿಸಿದರು. ಸಿ.ನಾಗೇಗೌಡ, ಶೋಭಾ ನಾಗೇಗೌಡ, ದೇವರಾಜು, ರವಿಕುಮಾರ್, ರಾಜೇಶ್ವರಿ ಇದ್ದರು. 
ಮಂಡ್ಯ

ಮಕ್ಕಳ ಪ್ರತಿಭೆ ಗುರುತಿಸಿದರೆ ಸಾಧನೆಗೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಸಿ.ನಾಗೇಗೌಡ ಅಭಿಮತ
  • ಪ್ರತಿಭಾ ಕಾರಂಜಿ ಕಾರ್ಯಕ್ರಮ
ಮದ್ದೂರು: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ವಿಶೇಷ ಪ್ರತಿಭೆಗಳಿರುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಪ್ರೋತ್ಸಾಹ ನೀಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಸಿ.ನಾಗೇಗೌಡ ತಿಳಿಸಿದರು.
ತಾಲೂಕಿನ ಕೆಸ್ತೂರು ಗ್ರಾಮದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳಲ್ಲಿ ಆಗಾಧವಾದ ಪ್ರತಿಭೆಯಿದ್ದು, ಇಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ಅತ್ಯುತ್ತಮ ಸಾಧನೆ ಮಾಡಿ ಶಾಲೆ, ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಲಿದ್ದಾರೆಂದು ಅಭಿಪ್ರಾಯಪಟ್ಟರು.
ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಪರೀಕ್ಷೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಿಇಒ ಧನಂಜಯ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಹೊರತರ ಬೇಕಾದದ್ದು ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿಯಾಗಿದ್ದು, ಕೇವಲ ಅಂಕಗಳಿಕೆಗಷ್ಟೇ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವಂತೆ ಕಿವಿಮಾತು ಹೇಳಿದರು.
ವಿವೇಕಾನಂದ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೋಭಾ ನಾಗೇಗೌಡ ಮಾತನಾಡಿ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಚಟುವಟಿಕೆಯಲ್ಲಿ ಪಾಲ್ಗೊಂಡು ಮುಂಚೂಣಿ ಸ್ಥಾನದಲ್ಲಿ ನಿಲ್ಲಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವೆಂದರು.
ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಲವಾರು ಬಗೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಪ್ರೇಕ್ಷಕರ ಹಾಗೂ ಪಾಲಕರ ಗಮನ ಸೆಳೆಯಿತು,
ಪ್ರಾಥಮಿಕ ಶಾಲಾ ವಿಭಾಗದ ವಿಜೇತರ: ಅರ್ಜುನ್, ಪುಣ್ಯಶ್ರೀ, ಪುಣ್ಯ, ಹಿಮಾ, ಗೌತಮ್, ಧೃತಿ, ಭೂಮಿಕಾ, ನಾಗೇಶ್, ಶ್ರಾವ್ಯಾ (ಪ್ರ). ತ್ರಿಷಾ, ಕನಸು, ಪಾವನಿ, ಜ್ಞಾನವಿ, (ದ್ವಿ), ದೃಷ್ಟಿ, ಕನಸು, ಪಾವನಿ (ತೃ).
ಪ್ರೌಢಶಾಲಾ ವಿಭಾಗ: ನವ್ಯ ಕವನ, ವಾಚನ (ಪ್ರ) ಜೀವನ್ ರಾಜ್, ಸಂಸ್ಕೃತಿ (ದ್ವಿ), ಕೆ.ಸ್ನೇಹ ಜನಪದ (ತೃ) ಸ್ಥಾನ ಬಹುಮಾನ ಪಡೆದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ರವಿಕುಮಾರ್, ಅಕ್ಷರ ದಾಸೋಹ ಉಪ ನಿರ್ದೇಶಕಿ ರಾಜೇಶ್ವರಿ, ಶಿಕ್ಷಕರಾದ ಉದಯ, ಪ್ರಕಾಶ್, ಚಿಕ್ಕಮರಿಗೌಡ ಇದ್ದರು.