ಮಂಡ್ಯ ನಗರದಲ್ಲಿ ರೈತ ಸಂಘದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.  
ಮಂಡ್ಯ

ಜ.26ರಂದು ಕಪ್ಪು ಬಾವುಟ ಪ್ರದರ್ಶನ: ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾಹಿತಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳ ವಿಲೀನಕ್ಕೆ ವಿರೋಧ
  • ಜಿಲ್ಲಾ ಕೇಂದ್ರಗಳಲ್ಲಿ ಕಪ್ಪುಬಾವುಟ ಪ್ರದರ್ಶನ
  • ರೈತ ಸಂಘದಿಂದ ಎಚ್ಚರಿಕೆ
ಮಂಡ್ಯ: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಸಿರು ಸೇನೆ ಜತೆಗೂಡಿ ಜ.26ರ ಗಣರಾಜ್ಯೋತ್ಸವದಂದು ರಾಜ್ಯದ ಎಲ್ಲ 31 ಜಿಲ್ಲಾ ಕೇಂದ್ರಗಳಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ರಾಜ್ಯದಲ್ಲಿನ 40 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮ್ಯಾಗ್ನೆಟ್ ಮತ್ತು ಕೆಪಿಎಸ್ ಹೆಸರಿನಲ್ಲಿ ವಿಲೀನ ಮಾಡಲಾಗುತ್ತಿದೆ. ಇದರಿಂದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಸಂವಿಧಾನದ ಆರ್ಟಿಕಲ್ 21ಎ ನಂತೆ ಜನಸಾಮಾನ್ಯರಿಗೆ ಗುಣಮಟ್ಟದ ಉಚಿತ ಶಿಕ್ಷಣದ ಹಕ್ಕು ಸರ್ಕಾರಗಳು ನೀಡುವಲ್ಲಿ ವಿಫಲವಾಗಿವೆ. ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜಕಾರಣಿಗಳ ಕಪಿಮುಷ್ಠಿಯಲ್ಲಿವೆ. ಸರಕಾರಿ ಶಾಲೆಗಳಿಗೆ ಬೀಗ ಹಾಕಿ ಖಾಸಗಿ ಸಂಸ್ಥೆಗಳಿಗೆ ನೆರವಾಗಲು ಸರ್ಕಾರವು ಸಂವಿಧಾನ, ಸಮಾಜ ವಿರೋಧಿ ಕೆಲಸಕ್ಕೆ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ ಪ್ರಜಾಪ್ರಭುತ್ವ ಉಳಿಸಲು ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು, ಏಕ ರೂಪ ಶಿಕ್ಷಣ ನೀತಿ ಜಾರಿಗೆ ತರಬೇಕು. ರಾಜ್ಯದ 41,905 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ 5ನೇ ತರಗತಿ ವರೆಗೆ ದ್ವಿಭಾಷೆಯ ಸಿಬಿಎಸ್ಸಿ ಮಾದರಿ ಶಿಕ್ಷಣ, 6 ರಿಂದ 12ನೇ ತರಗತಿ ವರೆಗೆ ನವೋದಯ ಮಾದರಿ ಸಿಬಿಎಸ್ಸಿ ವಸತಿ ಶಾಲಾ ಶಿಕ್ಷಣ, ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡದೇ ನೇರವಾಗಿ ಎಸ್‌ಡಿಎಂಸಿ ಖಾತೆಗೆ ನೀಡುವಂತೆ ಒತ್ತಾಯಿಸಿದರು.
ತಾಲೂಕು ಗೌರವಾಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ, ಹಸಿರು ಸೇನೆ ಅಧ್ಯಕ್ಷ ಸಂತೋಷ್ ಮಂಡ್ಯಗೌಡ, ಎಸ್‌ಡಿಎಂಸಿ ಅಧ್ಯಕ್ಷ ತಗ್ಗಹಳ್ಳಿ ಅನಿಲ್‌ಕುಮಾರ್, ಮಂಜು ಇದ್ದರು.