ಕಿಕ್ಕೇರಿಯಲ್ಲಿ ಶುಕ್ರವಾರ ಜರುಗಿದ ರಂಗಹಬ್ಬದ ರಂಗನಕುಣಿತದಲ್ಲಿ ಪುಟಾಣಿಗಳು ಹಿರಿಯರೊಂದಿಗೆ ಕುಣಿದು ಕುಪ್ಪಳಿಸಿದರು.  
ಮಂಡ್ಯ

ಉಪ್ಪರಿಗೆ ಬಸವೇಶ್ವರ ಗುಡಿಯಲ್ಲಿ ರಂಗಹಬ್ಬದ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಕುಣಿತಕ್ಕೆ ಹುಬ್ಬೇರಿಸಿದ ಹಿರಿಯರು
ಕಿಕ್ಕೇರಿ: ಇಲ್ಲಿನ ಉಪ್ಪರಿಗೆ ಬಸವೇಶ್ವರ ಗುಡಿಯಲ್ಲಿ ಶುಕ್ರವಾರ ಸಂಭ್ರಮದಿಂದ ರಂಗಕುಣಿತ ಹಬ್ಬ ಆಚರಿಸಲಾಯಿತು. ಜಾನಪದ ಕಲೆಗಳಲ್ಲಿ ಒಂದಾದ ರಂಗಕುಣಿತದ ಹಬ್ಬಕ್ಕೆ ಪುಟಾಣಿ ಮಕ್ಕಳು ಹೆಜ್ಜೆ ಹಾಕಿದನ್ನು ನೋಡಿ ಹಿರಿಯರು ತಲೆದೂಗಿದರು.
ರಂಗ ಕುಣಿತದ ಹಬ್ಬಕ್ಕೆ ತಿಂಗಳುಗಟ್ಟಲೆ ತಾಲೀಮು ನಡೆಸಲಾಗಿತ್ತು. ರಂಗಕುಣಿತ ಹಿರಿಯ ಕಲಾವಿದ ನಾಗೇಗೌಡರ ಮಾರ್ಗದರ್ಶನಲ್ಲಿ ನಿತ್ಯ ಸಂಜೆ ವೇಳೆ ತಾಲೀಮು ನಡೆಯಿತು. ರಂಗಾಸಕ್ತ ದಾನಿಗಳು ನಿತ್ಯ ಅನ್ನ ಪ್ರಸಾದ ಸೇವೆಯನ್ನು ಹಮ್ಮಿಕೊಂಡು ಕಲಾವಿದರಿಗೆ ಹೊಸ ಹುರುಪು ನೀಡಿದ್ದರು.
ಶುಕ್ರವಾರ ಅಂತಿಮವಾಗಿ ರಂಗಕುಣಿತವನ್ನು ದೇವರಿಗೆ ಒಪ್ಪಿಸುವ ಕ್ರಿಯೆಗೆ ಚಾಲನೆ ನೀಡಲಾಯಿತು. ತಮಟೆ ನಾದದ ಏರಿಳಿತಕ್ಕೆ ಕುಣಿಯುವ ಭಂಗಿ ಅಭ್ಯಾಸ ಮಾಡಿಕೊಂಡು ವಿವಿಧ ಬಗೆಯ ಕುಣಿತ ಹಾಕಿದ ಪುಟಾಣಿಗಳು ಹಿರಿಯರಿಗೆ ಕಡಿಮೆ ಇಲ್ಲದೆ ಕುಣಿದು ಕುಪ್ಪಳಿಸಿದರು.
ಯುವಕರು ಕಾಲಿಗೆ ಗೆಜ್ಜೆ ಕಟ್ಟಿ, ತಿಲಕವಿಟ್ಟುಕೊಂಡು ಕೈಯಲ್ಲಿ ಟವಲ್ ಹಿಡಿದು ಸಾಲು ಸಾಲು ನಿಂತು ಸಜ್ಜಾದರು. ತಮಟೆ ನಾದಕ್ಕೆ ತಕ್ಕಂತೆ ಒಂದು ಹೆಜ್ಜೆ, ಎರಡು ಹೆಜ್ಜೆ ಕುಣಿತದಂತಹ ವಿವಿಧ ಕುಣಿತದ ಭಂಗಿಗಳನ್ನು ಹಾಕುತ್ತ ರಥಬೀದಿಯ ಮೂಲಕ ಸಾಗಿದರು. 5 ಹೆಜ್ಜೆಯ ತಿರುಣಿ ಕುಣಿತ, ಮತ್ತಿತರ ಭಂಗಿಯ ಕುಣಿತವನ್ನು ಲಯಬದ್ಧವಾಗಿ ಹಾಕುತ್ತ ಭೂ ಭಲಾರೇ ಭಲೆ ಸೈ ಎಂದು ಕೂಗಿದರು.
ಇಲ್ಲಿನ ರಥಬೀದಿ, ಹೊಸಬೀದಿ, ಕೆ.ಎಸ್.ನರಸಿಂಹಸ್ವಾಮಿ ವೃತ್ತದ ಬಳಿ ಸಾಗಿ ಅಂತಿಮವಾಗಿ ಕಿಕ್ಕೇರಮ್ಮ ಗುಡಿಗೆ ತೆರಳಿತು. ಪುಟಾಣಿ ಮಕ್ಕಳು, ಯುವಕರು ಹಿರಿಯರೊಂದಿಗೆ ಗೆಜ್ಜೆ ಸಪ್ಪಳದೊಂದಿಗೆ ಹೆಜ್ಜೆಹಾಕುವ ಮೂಲಕ ರಂಗ ಕುಣಿತದಲ್ಲಿ ಭಾಗವಹಿಸಿ ಜಾನಪದ ಹಬ್ಬವಾದ ರಂಗಕುಣಿತಕ್ಕೆ ಮೆರುಗು ನೀಡಿದರು. ಊರ ಹೊರಗಿನ ಕಿಕ್ಕೇರಮ್ಮನ ಗುಡಿ ಬಳಿ ಪ್ರವೇಶದ್ವಾರದಲ್ಲಿ ಕುಣಿದು ದೇವಿಗೆ ಗೆಜ್ಜೆ ನಮಸ್ಕಾರ ಹಾಕಿ ರಂಗಕುಣಿತವನ್ನು ಸಮರ್ಪಣೆ ಮಾಡಿದರು. ಬಳಿಕ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ದೇವಿ ದರ್ಶನ ಪಡೆದು ನಮಿಸಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಬಲುದಿನಗಳಿಂದ ಹಬ್ಬವಿಲ್ಲದೆ ಬಸವಳಿದಿದ್ದ ಹೋಬಳಿಯ ಜನತೆಗೆ ಯುಗಾದಿ ಹಬ್ಬದ ರಂಗಕುಣಿತ ತುಸು ಮನೋರಂಜನೆ, ಖುಷಿ ನೀಡಿತು.