ತಮಿಳುನಾಡಿನ ಶ್ರೀ ಪೆರಂಬೂದೂರಿನ ಕಲಿಯನ್ ರಾಮಾನುಜಕೂಟದಲ್ಲಿ ಆಯೋಜಿಸಿದ್ದ ಉಪನ್ಯಾಸ ನೀಡಿದ ಸ್ಥಾನೀಕಂ ಅನುರಾಧಾ ಅವರನ್ನು ಭಾಗವತ ಮುಖಂಡರು ಅಭಿನಂದಿಸಿದರು.
ಮೇಲುಕೋಟೆ : ಭಗವದ್ ರಾಮಾನುಜಾಚಾರ್ಯರು ಭಾಷೆಯ ಗಡಿಮೀರಿ ಭಾರತಾದ್ಯಂತ ಸಮಾನತೆಯ ಸಾಮರಸ್ಯ ಸಾರಿದ ಭಾರತದ ಶ್ರೇಷ್ಠ ಸಂತರು ಎಂದು ಮೇಲುಕೋಟೆಯ ಯತಿರಾಜದಾಸರ್ ಗುರುಪರಂಪರೆಯ ಸ್ಥಾನೀಕಂ ಅನುರಾಧಾ ತಿಳಿಸಿದರು.
ತಮಿಳುನಾಡಿನ ಆಚಾರ್ಯರ ಅವತಾರ ಸ್ಥಳ ಶ್ರೀ ಪೆರಂಬೂದೂರಿನ ಕಲಿಯನ್ ರಾಮಾನುಜಕೂಟದಲ್ಲಿ ಗುರುವಾರ ಆಯೋಜಿಸಿದ್ದ ರಾಮಾನುಜರು-ಮೇಲುಕೋಟೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಾನುಜಾಚಾರ್ಯರು 11ನೇ ಶತಮಾನದ ಜಾತಿವ್ಯವಸ್ಥೆಯ ಬಿಗಿಯಾದ ಕಟ್ಟುಪಾಡುಗಳ ನಡುವೆಯೂ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಲು ದೇವಾಲಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲು ಶ್ರಮಿಸಿದ್ದರು. ಪ್ರಮುಖವಾಗಿ ಹರಿಜನರಿಗೆ ತಿರುಕುಲತ್ತಾರ್ ಎಂಬ ಗೌರವನೀಡಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಪ್ರಪ್ರಥಮವಾಗಿ ಮುಕ್ತಪ್ರವೇಶ ದೊರಕಿಸಿಕೊಟ್ಟರು. ರಾಮಾನುಜರು ಒಂದು ರಾಜ್ಯಕ್ಕೆ ಸೀಮಿತವಾಗದೆ ಭಾರತದಾದ್ಯಂತ ಸಂಚರಿಸಿ ಭಕ್ತಿಸಿದ್ಧ್ದಾಂತದ ತಳಹದಿಯಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಪ್ರಮುಖ ದೇವಾಲಯಗಳಲ್ಲಿ ಉತ್ಸವ ಮಹೋತ್ಸವ ಬ್ರಹ್ಮೋತ್ಸವಗಳನ್ನು ಆಗಮೋಕ್ತವಾಗಿ ಅನುಷ್ಠಾನಗೊಳಿಸಿ ಎಲ್ಲ ಸಮುದಾಯದವರೂ ಪಾಲ್ಗೊಳ್ಳುವಂತೆ ಮಾಡಿ ದೇವಾಲಯಗಳನ್ನು ಸಮಾಜಕೇಂದ್ರಿತವಾಗಿ ರೂಪಿಸಿದರು. ಭಾರತದ ಸಾವಿರಾರು ದೇವಾಲಯಗಳಲ್ಲಿ ಇಂದಿಗೂ ಮಹತ್ವವನ್ನು ಕಾಣಬಹುದಾಗಿದೆ ಎಂದರು.
ರಾಮಾನುಜಾಚಾರ್ಯರು ತಮಿಳುನಾಡಿನಲ್ಲಿ ಜನಿಸಿದರೂ ಕರ್ನಾಟಕದ ಮೇಲುಕೋಟೆಯಲ್ಲಿ 14ವರ್ಷಗಳ ಕಾಲ ವಾಸ್ತವ್ಯ ಮಾಡಿ ತಮ್ಮ ಕರ್ಮಭೂಮಿಯಾಗಿಸಿಕೊಂಡು ಕರುನಾಡಿಗೂ ಅಪಾರಕೊಡುಗೆ ನೀಡಿದ್ದಾರೆ. 11ನೇಶತಮಾನದಲ್ಲೇ ತಮಿಳುನಾಡು-ಕರ್ನಾಟಕದ ಸಂಸ್ಕೃತಿ ಬೆರೆಯುವಂತೆ ಮಾಡಿ ಭಾರತದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿದಿದ್ದಾರೆ.
ಜಾತಿಬೇಧವಿಲ್ಲದೆ ರಾಮಾನುಜರ ತತ್ವಸಿದ್ಧಾಂತ ಅಳವಡಿಸಿಕೊಂಡವರು. ಭಾರತಾದ್ಯಂತ ರಾಮಾನುಜಕೂಟಂಗಳನ್ನು ಸ್ಥಾಪಿಸಿ ಪರಂಪರೆಯಕೊಂಡಿಯಾಗಿರುವುದನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಣಬಹುದು. ಶ್ರೀವೈಷ್ಣವ ಎಂದರೆ ಅದು ಜಾತಿಯಲ್ಲ, ರಾಮಾನುಜರ ತತ್ವಸಿದ್ಧಂತಗಳನ್ನು ಅನುಸಿರುವ ಭಕ್ತಸಮೂಹ ಎಂಬುದನ್ನು ಅರಿಯಬೇಕು. ಭಗವಂತನ ದೃಷ್ಟಿಯಲ್ಲಿ ಶ್ರೀ ವೈಷ್ಣವರೆಲ್ಲರೂ ಸಮಾನರು, ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಕೆಲವು ರಾಮಾನುಜಕೂಟಂಗಳು ಮೇಲುಕೋಟೆಯಲ್ಲಿ ಛತ್ರಗಳನ್ನು ನಿರ್ಮಿಸಿ ವೈರಮುಡಿ ಉತ್ಸವದ ವೇಳೆ ಮಂಟಪೋತ್ಸವ ನಡೆಸುವ ಕಾರಣ ಚೆಲುವನಾರಾಯಣಸ್ವಾಮಿಯೇ ನಿಮ್ಮ ಬಳಿಗೆ ಬಂದು ಪೂಜೆ ಸ್ವೀಕರಿಸುತ್ತಾನೆ. ಇಂತಹ ಸಂಪ್ರದಾಯ ರಾಮಾನುಜರ ಭಕ್ತಿಮಾರ್ಗದ ಸಂಪ್ರದಾಯದಲ್ಲಿ ಮಾತ್ರ ಕಾಣಲು ಸಾಧ್ಯ, ಈ ಪರಂಪರೆಯನ್ನು ನೀವೆಲ್ಲ ಮುಂದುವರಿಸಬೇಕು. ಅದಕ್ಕಾಗಿಯೇ ರಾಮಾನುಜರು ನಿಮ್ಮನ್ನು ಭಾಗವತರು ಎಂದು ಕರೆದು ಗೌರವಿಸಿದ್ದಾರೆ ಎಂದರು.
ವಿವಿಧ ಜನಾಂಗಗಳನ್ನೊಳಗೊಂಡ ಸಾವಿರಾರು ಜನ ಒಗ್ಗೂಡಿ ಕಲಿಯನ್ ರಾಮಾನುಜಕೂಟಂ ಸ್ಥಾಪಿಸಿ ಶತಶತಮಾನಗಳಿಂದ ತಮಿಳುನಾಡಿನ ಶ್ರೀ ಪೆರಂಬದೂರಿನ ರಾಮಾನುಜರ ತಿರುನಕ್ಷತ್ರ ಮಹೋತ್ಸವ ಮೇಲುಕೋಟೆಯ ವೈರಮುಡಿ, ತಿರುಪತಿ, ಕಂಚಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಮಹೋತ್ಸವಗಳಲ್ಲಿ ಹತ್ತು ದಿನಗಳ ಕಾಲ ತಿರುವಾಯಿಮೊಳಿಗೋಷ್ಠಿ, ಉಪನ್ಯಾಸ ಎರಡೂ ವೇಳೆ ಸಮಾರಾಧನೆ(ಅನ್ನಸಂತರ್ಪಣೆ), ಉತ್ಸವಗಳಿಗೆ ಸಹಕಾರ ನೀಡುತ್ತಾ ರಾಮಾನುಜಕೂಟಂ ಮೂಲಕ ಸೇವೆ ಮಾಡುತ್ತಾ ಬಂದಿರುವ ಪರಂಪರೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಕಲಿಯನ್ ರಾಮಾನುಜಕೂಟಂನ ಮುಖಂಡ ಭಾಗವತ ದೇವರಾಜನ್ ಮಾತನಾಡಿ, ರಾಮಾನುಜರು ಹಾಕಿಕೊಟ್ಟ ಭಕ್ತಿಸಿದ್ಧಾಂತದಲ್ಲಿ ಸಾಗುತ್ತಾ ಜನಸಮೂಹದ ಸೇವೆಯೊಂದಿಗೆ ಭಗವಂತನನ್ನು ಕಾಣುತ್ತಿದ್ದೇವೆ. ಮೇಲುಕೋಟೆ ಯತಿರಾಜದಾಸರ್ ಗುರುಪರಂಪರೆಯ ಸದಸ್ಯರು ಭಾಗವಹಿಸಿ ಉಪನ್ಯಾಸ ನೀಡಿ ಮೇಲುಕೋಟೆಯ ಮಹತ್ವಗಳ ಮಾಹಿತಿ ನೀಡಿದ್ದಕ್ಕೆ ಅಭಾರಿಯಾಗಿದ್ದೇವೆ ಎಂದರು.