ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಅಲಂಕಾರದಲ್ಲೇ ರಾಜಮುಡಿ ಧರಿಸಿ ಅದೇ ಅಲಂಕಾರದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶಮಾಡಿಲಾಗಿತ್ತು  
ಮಂಡ್ಯ

ವೈರಮುಡಿ ಅಲಂಕಾರದಲ್ಲೇ ರಾಜಮುಡಿ ದರ್ಶನ

ಶಿವಶಂಕರ್ ಎಂ. ಹೆಬ್ಬಳ್ಳ
ಮೇಲುಕೋಟೆ : ಪ್ರತೀವರ್ಷದಂತೆ ಈ ವರ್ಷವೂ ವೈರಮುಡಿ ಅಲಂಕಾರದಲ್ಲೇ ರಾಜಮುಡಿ ಕಿರೀಟ ಧರಿಸಿ 15 ನಿಮಿಷಗಳ ಕಾಲ ಭಕ್ತರಿಗೆ ದರ್ಶನ ಕಲ್ಪಿಸಲಾಗಿತ್ತು.
ಶನಿವಾರ ಮಳೆ ಬಂದು ವೈರಮುಡಿ ಉತ್ಸವ ರಾತ್ರಿ 1-30ಕ್ಕೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮುಕ್ತಾಯವಾದ ಕಾರಣ ರಾತ್ರಿ 2ಗಂಟೆಗೆ ಗಂಡುಭೇರುಂಡ ಪ್ರಭಾವಳಿಯ ವೈರಮುಡಿ ಅಲಂಕಾರದಲ್ಲಿ ರಾಜಮುಡಿ ಧರಿಸಿ 5 ಗಂಟೆಯವರೆಗೆ ಸುಮಾರು 3ಗಂಟೆಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು. ಕೊನೆಯಲ್ಲಿ ವೈರಮುಡಿ ಉತ್ಸವ ದರ್ಶನಕ್ಕೆ ಬಂದ ಭಕ್ತರೂ ಸೇರಿದಂತೆ ಸಹಸ್ರಾರು ಭಕ್ತರು ವೈರಮುಡಿ ಅಲಂಕಾರದಲ್ಲಿ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿ ಧನ್ಯತಾಭಾವ ಅನುಭವಿಸಿದರು.
 ಸ್ವಾಮಿಯ ದರ್ಶನಕ್ಕೆ ಭಕ್ತರು ವಾಹನೋತ್ಸವದ ಬಲಬಾಗದಿಂದ ಬಂದು ದರ್ಶನ ಮಾಡಿ ಎಡಭಾಗದಿಂದ ತೆರಳಲು ಅವಕಾಶ ಮಾಡಿಕೊಟ್ಟು  ಭಕ್ತರ ಭಾವನೆಗೆ ಬೆಲೆ ನೀಡಿದ್ದು ಈ ವರ್ಷದ ವಿಶೇಷವಾಗಿತ್ತು. ರಾಜಮುಡಿ ಕಿರೀಟಧರಿಸಿದ ವೇಳೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರನ್ನು ವೈರಮುಡಿ ಉತ್ಸವ ಯಶಸ್ವಯಾಗಿ ನಡೆಸಿದ್ದಕ್ಕಾಗಿ ಪರಂಪರೆಯಂತೆ ಗೌರವಿಸಲಾಯಿತು.