ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. 
ಮಂಡ್ಯ

ಸಾವಯವ ಕ್ರಾಂತಿಗೆ ಮಂಡ್ಯ ಬುನಾದಿಯಾಗಲಿ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಹೇಳಿಕೆ ·

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದ ಕಲಾಮಂದಿರದಲ್ಲಿ ರೈತೋತ್ಸವ
  • ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘ, ರೈತರ ಶಾಲೆಯಿಂದ ಆಯೋಜನೆ
ಮಂಡ್ಯ: ಭವಿಷ್ಯದಲ್ಲಿ ಸಾವಯವ ಹಸಿರು ಕ್ರಾಂತಿಗೆ ಮಂಡ್ಯ ಜಿಲ್ಲೆ ಬುನಾದಿ ಆಗಲಿ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಆಶಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘ, ರೈತರ ಶಾಲೆ ಹಾಗೂ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿಯಿಂದ ನಿರ್ಮಾಣವಾಗಿರುವ ಕನ್ನಂಬಾಡಿ ಅಣೆಕಟ್ಟೆ ವ್ಯಾಪ್ತಿಯ ಲಕ್ಷಾಂತರ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯ ಕೃಷಿಕರು ಸಾಂಪ್ರದಾಯಿಕ ಬೆಳೆಗಳಾದ ಕಬ್ಬು ಹಾಗೂ ಭತ್ತದ ಬೆಳೆಗಳನ್ನೇ ಬೆಳೆಯುವ ಬದಲು, ಎಣ್ಣೆ ಕಾಳುಗಳು, ಹಣ್ಣು ತರಕಾರಿಗಳು, ಸಿರಿಧಾನ್ಯಗಳು ಸೇರಿದಂತೆ ದೇಸಿ ತಳಿಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಆ ಮೂಲಕ ಸಾವಯವ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಪಾಂಡವಪುರ ತಾಲೂಕನ್ನು ಸಾವಯವ ಕೃಷಿ ತಾಲೂಕಾಗಿ ಘೋಷಣೆ ಮಾಡಿದ್ದು, 2029ಕ್ಕೆ ಮಂಡ್ಯ ಸಾವಯವ ಕೃಷಿ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಿಸಲ್ಪಡಬೇಕು. ಈ ನಿಟ್ಟಿನಲ್ಲಿ ಆಲಕೆರೆಯ ರೈತ ಶಾಲೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಅನೇಕ ಪ್ರಗತಿಪರ ಯುವ ರೈತರು ರೈತ ಶಾಲೆಯನ್ನು ಆರಂಭಿಸಿ ರೈತ ಉತ್ಪಾದಕ ಸಂಘವನ್ನು ಸ್ಥಾಪಿಸಿ ಉತ್ಪಾದನಾ ಹೆಚ್ಚಳ, ಮೌಲ್ಯವರ್ಧನೆ ಹಾಗೂ ಬೆಲೆ ವೃದ್ದಿಗೆ ಆದ್ಯತೆ ನೀಡಿದ್ದಾರೆ. ಜಿಲ್ಲೆಯಲ್ಲಿ ನಶಿಸುತ್ತಿರುವ ಮುಯ್ಯಿ ಆಳು ಹಾಗೂ ನಾಟಿ ನೆಡುವ ಸಂಸ್ಕೃತಿಯನ್ನು ಬಲವರ್ಧನೆಗೊಳಿಸುವ ಹೊಣೆಗಾರಿಕೆ ಇಂದಿನ ಯುವಕರಲ್ಲಿ ಮೂಡಬೇಕು ಎಂದು ಕರೆ ನೀಡಿದರು.
ಟನ್ ಕಬ್ಬು ಕಟಾವಿಗೆ 600 ರೂ. ಇದ್ದ ಕೂಲಿ ಹಣ ಇಂದು 1200 ರೂ. ಆಗಿದೆ. ಜಿಲ್ಲೆಯ ಯುವಕರು ಕಬ್ಬು ಕಡಿಯುವ ವೃತ್ತಿಯನ್ನು ಮರೆತರೆ ಕಬ್ಬಿನ ಪೂರ್ಣ ಬೆಲೆಯನ್ನು ಕಟಾವು ಹಾಗೂ ಸಾಗಾಣಿಕೆಗೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯುವ ರೈತರು ಕಬ್ಬು ಕಟಾವಿಗೆ ಆಸಕ್ತಿ ತೋರಬೇಕು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹಗಲಿರುಳೂ ಕೃಷಿ ಕಾಯಕದಲ್ಲಿ ತೊಡಗಿರುವ ಹೆಣ್ಣು ಮಕ್ಕಳು ನಮ್ಮ ಕೃಷಿ ದೇವತೆಗಳು. ಅವರೇ ನೈಜ ಶ್ರಮಜೀವಿಗಳು. ಅವರನ್ನು ಸತ್ಕರಿಸುವ ಯೋಜನೆ ಅಭಿನಂದನೀಯ ಎಂದು ಬಣ್ಣಿಸಿದರು.
ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕೆಂಬ ಸದುದ್ದೇಶದಿಂದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠ, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘ ಹಾಗೂ ರೈತರ ಶಾಲೆ ವತಿಯಿಂದ ಅಕ್ಷಯ್ ಆಳ್ವ ಮತ್ತು ರಾಗಿಮುದ್ದನಹಳ್ಳಿ ನಾಗೇಶ್ ಅವರ ನೆರವಿನಿಂದ ಮಲೆನಾಡ ಗಿಡ್ಡ ಹಸುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ ನೂರಾರು ಜೋಡಿ ಹಸುಗಳನ್ನು ವಿತರಿಸಿರುವುದನ್ನು ಶ್ಲಾಘಿಸಿದರು.
ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧುಚಂದನ್ ಮಾತನಾಡಿ, ಗೋವುಗಳನ್ನು ಪೂಜಿಸುವ ನಮ್ಮ ಗ್ರಾಮೀಣ ವಾಸಿಗಳು ರಾಸುಗಳನ್ನು ಸಾಕಲು ಹಿಂದೇಟು ಹಾಕುತ್ತಿರುವುದು ಸರಿಯಾದ ಕ್ರಮವಲ್ಲ. ಗಂಡು ಕರು ಜನಿಸಿದ ಮಾರನೇ ದಿನವೇ ಕಟುಕರಿಗೆ ನೀಡುವ ಪ್ರವೃತ್ತಿಯೂ ಸರಿಯಲ್ಲ. ಸಾವಯವ ಕೃಷಿಯೇ ಜಿಲ್ಲೆಯ ರೈತರ ಏಳಿಗೆಗೆ ಬುನಾದಿಯಾಗಿದ್ದು, ಈ ನಿಟ್ಟಿನಲ್ಲಿ ರೈತರು ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು.
ಮನ್‌ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಎಂ.ಎಂ ಫೌಂಡೇಷನ್‌ನ ಮುದ್ದನಘಟ್ಟ ಮಹಾಲಿಂಗೇಗೌಡ, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಎಂ.ಎನ್. ಚಂದ್ರಶೇಖರ್, ಅಧ್ಯಕ್ಷ ನವೀನ್‌ಕುಮಾರ್, ಕಾರ್ಯದರ್ಶಿ ಸತ್ಯಮೂರ್ತಿ, ಮಲೆನಾಡ ಗಿಡ್ಡ ಸಂವರ್ಧನಾ ಹಾಗೂ ಸಂರಕ್ಷಣಾ ಅಭಿಯಾನದ ಅಧ್ಯಕ್ಷ ಅಕ್ಷಯ್ ಆಳ್ವ, ವಿನಯ್, ನ್ಯೂಟ್ರಿಕಾರ್ಫ್ ವ್ಯವಸ್ಥಾಪಕ ನಿರ್ದೇಶಕ ಜಿ.ಅಜಯ್, ವಿ.ಎಸ್.ಅಶೋಕ್, ಮಹದೇವು, ರಾಗಿಮುದ್ದನಹಳ್ಳಿ ನಾಗೇಶ್, ಡಾ. ಅನಿತಾ ಇತರರಿದ್ದರು.