ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಹೊಸ ಬಡವಾಣೆಯಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ತೆಂಗಿನ ಮರ ವಿದ್ಯುತ್ ತಂತಿಗಳ ಸಹಿತ ಮುರಿದು ಬಿದ್ದ ಪರಿಣಾಮ ರಾಘವೇಂದ್ರ ಎಂಬುವರ ಮನೆಯ ಕಾಂಪೌಂಡ್ ಮೇಲೆ ಬಿದ್ದಿರುವುದು.
ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಕಳೆದ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಹಲವಾರು ಕಡೆ ತೆಂಗು ಹಾಗೂ ಅಡಕೆ ಮರಗಳು ಸೇರಿದಂತೆ 28ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ಸಾಕಷ್ಟು ಹಾನಿ ಉಂಟುಮಾಡಿದೆ.
ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಹೊಸ ಬಡವಾಣೆಯಲ್ಲಿನ ಮನೆಗಳ ಬಳಿ ಹಾದು ಹೋಗಿದ್ದ 11 ಕೆವಿ ವಿದ್ಯುತ್ ತಂತಿಯ ಮೇಲೆ ಜೋರಾಗಿ ಬೀಸಿದ ಗಾಳಿಗೆ ಒಮ್ಮೆಲೆ ತೆಂಗಿನ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ಮುರಿದು ದಿನೇಶ್ ಹಾಗೂ ಪ್ರಕಾಶ್ ಎಂಬುವರ ಮನೆಗಳ ಶೆಡ್‌ಗೆ ಅಳವಡಿಸಿದ್ದ ತಗಡಿನ ಶೀಟ್‌ಗಳು ಸೇರಿದಂತೆ ಸಣ್ಣಪುಟ್ಟ ಗೋಡೆಯ ಭಾಗ ಮುರಿದು ತಂತಿಗಳು ಜೋತು ಬಿದ್ದಿವೆ.
ಅಲ್ಲದೆ ರಾಘವೇಂದ್ರ ಎಂಬುವರ ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಕಾಂಪೌಂಡ್‌ಗೆ ಹಾನಿಯಾಗಿದೆ. ಅದೃಷ್ಟವಶಾತ್ ಕಂಬಗಳು ಉರುಳಿ ಬಿದ್ದ ತಕ್ಷಣ ವಿದ್ಯುತ್ ಕಡಿತಗೊಂಡಿದ್ದರಿಂದ ದೊಡ್ಡ ಹಾನಿ ತಪ್ಪಿದೆ. ಪಕ್ಕದ ಗ್ರಾಮದ ಖಾಸಗಿ ರೈಸ್‌ಮಿಲ್‌ಗೆ ವಿದ್ಯುತ್ ಸಂಪರ್ಕ ನೀಡಲು ಜನವಸತಿ ಪ್ರದೇಶದಲ್ಲಿ ಬೃಹತ್ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ 11 ಕೆ.ವಿ ಮಾರ್ಗವನ್ನು ಸೆಸ್ಕ್ ಹಾಕಿದ್ದು, ಇದನ್ನು ತೆರವು ಮಾಡುವಂತೆ ಸಾಕಷ್ಟು ಬಾರಿ ಲಿಖಿತ ರೂಪದಲ್ಲಿ ದೂರು ನೀಡಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷಿಸಿದ್ದಾರೆ. ಈಗ ಅನಾಹುತ ತಪ್ಪಿದ್ದು, ಒಂದು ವೇಳೆ ಏನಾದರೂ ಆಗಿದ್ದಲ್ಲಿ ಇದಕ್ಕೆ ಯಾರು ಹೊಣೆ? ಎಂದು ಬಡಾವಣೆಯ ನಿವಾಸಿ ಬಿ.ಸಿ.ನರಸಿಂಹಮೂರ್ತಿ ಆಕ್ರೋಶ ಹೊರಹಾಕಿದರು.
ಇನ್ನು ತಾಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿಯ ಶೆಟ್ಟಹಳ್ಳಿ, ದರಸಗುಪ್ಪೆ, ಕಸಬಾ ಹೋಬಳಿಯ ನಗುವನಹಳ್ಳಿ, ಚಂದಗಾಲು, ಮೇಳಾಪುರ, ಅರಕೆರೆ ಹೋಬಳಿಯ ವಿವಿಧೆಡೆ ತೆಂಗು ಮತ್ತು ಅಡಕೆ ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಕಾರಣ ವಿದ್ಯುತ್ ಕಂಬಗಳು, ಪರಿವರ್ತಕಗಳ ಕಂಬಗಳು ಸಹ ಮುರಿದು ಸುಮಾರು 15 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಸೆಸ್ಕ್ ಸಹಾಯಕ ಎಇಇ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಬಲ್ಲೇನಹಳ್ಳಿ ಗ್ರಾಮದ ಹೊಸ ಬಡವಾಣೆಯ ಜನರ ದೂರು ಆಲಿಸಲಾಗಿದ್ದು, ಸ್ಥಳ ಪರಿಶೀಲನೆ ಜತೆಗೆ ಎದುರಾಗಿರುವ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ತಿಳಿಸಿದರು.