ದೆಹಲಿಯಲ್ಲಿ ಸಂಸತ್ ಭವನದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಮಾತುಕತೆ ನಡೆಸಿದರು. 
ಮಂಡ್ಯ

ಮದ್ದೂರು ರೈಲು ನಿಲ್ದಾಣ ಮೇಲ್ದರ್ಜೆಗೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರೈಲು ಮಾರ್ಗದ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ
  • ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಎಚ್ಡಿಕೆ ಮಾತುಕತೆ
ಮಂಡ್ಯ: ಮಂಡ್ಯ, ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಮಾತುಕತೆ ನಡೆಸಿದರು.
ದೆಹಲಿಯಲ್ಲಿ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದ ಕುಮಾರಸ್ವಾಮಿ, ಪ್ರಮುಖವಾಗಿ ಬೆಂಗಳೂರು ನಗರದಿಂದ ಮೈಸೂರು ನಡುವೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಸಾರ್ವಜನಿಕರ ರೈಲ್ವೆ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು.
ಅದರಂತೆ ಮದ್ದೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಮನವಿ ಮಾಡಿದ ಎಚ್‌ಡಿಕೆ, ಈ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣಿ ಹೆಚ್ಚಾಗಿರುವುದರಿಂದ ಆಧುನೀಕರಿಸಿ ಮೇಲ್ದರ್ಜೆಗೆ ಏರಿಸಬೇಕು. ಅಂತೆಯೇ ಬೆಂಗಳೂರು-ಮಂಗಳೂರು- ಮುರುಡೇಶ್ವರ ನಡುವೆ ಸಂಚರಿಸುವ ರೈಲು(ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವರು, ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಮನವಿ: ಮಂಡ್ಯ-ಪಾಂಡವಪುರ ಮಾರ್ಗದಲ್ಲಿ ರೈಲುಗಳ ನಿರಂತರ ಸಂಚಾರದಿಂದಾಗಿ ರೈತರು ಮತ್ತು ಸಾರ್ವಜನಿಕರು ದೀರ್ಘಕಾಲದಿಂದ ಸಂಚಾರ ಅಡಚಣೆ ಎದುರಿಸುತ್ತಿದ್ದಾರೆ. ಅಲ್ಲದೆ ಮತ್ತು ಸುರಕ್ಷತಾ ಕಾಳಜಿಗಳು ಸೇರಿದಂತೆ ತೀವ್ರ ಅನಾನುಕೂಲತೆ ಎದುರಿಸುತ್ತಿದ್ದಾರೆ. ವಿ.ಸಿ ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ಇಲ್ಲದಿರುವುದು ದೈನಂದಿನ ಪ್ರಯಾಣ ಮತ್ತು ಕೃಷಿ ಉತ್ಪನ್ನಗಳ ಸಾಗಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಈ ಜಾಗದಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಸಚಿವರು ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.
ಅಂತೆಯೇ ಮಂಡ್ಯದಿಂದ ತೂಬಿನಕೆರೆ, ಪಾಂಡವಪುರದಿಂದ ಕೆ.ಆರ್.ಎಸ್ ಮತ್ತು ಕೆ.ಆರ್.ಪೇಟೆ ಮತ್ತು ಮಡಿಕೇರಿ ಕಡೆಗೆ ಪ್ರಯಾಣಿಸುವ ವಾಹನಗಳು ದೊಡ್ಡಬ್ಯಾಡರಹಳ್ಳಿಯಲ್ಲಿ ತೀವ್ರ ಸಂಚಾರ ದಟ್ಟಣೆ ಹೊಂದಿರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಸ್ತಿತ್ವದಲ್ಲಿರುವ ಲೆವೆಲ್ ಕ್ರಾಸಿಂಗ್ ಪ್ರಮುಖ ಅಡಚಣೆಯಾಗಿದ್ದು, ಪ್ರಯಾಣಿಕರಿಗೆ ಆಗಾಗ್ಗೆ ವಿಳಂಬ ಮತ್ತು ಅನಾನುಕೂಲ ಉಂಟು ಮಾಡುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಎಚ್‌ಡಿಕೆ ಮನವಿ ಮಾಡಿದರು
ಯಾರ್ಡ್ ಸ್ಥಾಪನೆಗೆ ಒತ್ತಾಯ: ಪಾಂಡವಪುರ ಪಟ್ಟಣವು ಕೆ.ಆರ್.ಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ವ್ಯಾಪಾರ ಕೇಂದ್ರ ಸ್ಥಾನವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ವಾಣಿಜ್ಯ ಸರಕುಗಳ ದಕ್ಷ ಸಾಗಣೆಗೆ ಅನುಕೂಲವಾಗುವಂತೆ ರೈತರು ಮತ್ತು ವ್ಯಾಪಾರಿಗಳಿಗೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.
ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗಕ್ಕೆ ಮಂಜೂರಾತಿ ನೀಡುವಂತೆ ಸಚಿವ ಕುಮಾರಸ್ವಾಮಿ ಅವರು ಅಶ್ವಿನಿ ವೈಷ್ಣವ ಅವರಲ್ಲಿ ಮನವಿ ಮಾಡಿದರು. ಈ ಮಾರ್ಗವು ಹೆಜ್ಜಾಲ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಸಂಚರಿಸುತ್ತದೆ. ಈ ಮಾರ್ಗವು ಬಹಳ ಮುಖ್ಯವಾಗಿದ್ದು, ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.
ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಹಾಸನ ಜಿಲ್ಲೆಯ ಸಕಲೇಶಪುರ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡುವುದು, ಹೊಸಕೋಟೆ ತಾಲೂಕಿನ ತಿಂಡ್ಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಮ್ಯಾಜಿಕ್ ಬಾಕ್ಸ್‌ಗಳನ್ನು ಅಳವಡಿಸುವುದು ಸೇರಿ ಹಲವಾರು ಪ್ರಸ್ತಾವನೆಗಳನ್ನು ರೈಲ್ವೆ ಸಚಿವರಿಗೆ ಸಲ್ಲಿಸಿದರು. ಈ ಎಲ್ಲ ಬೇಡಿಕೆಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತ್ವರಿತವಾಗಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ. ಬುಧವಾರವೂ ರೈಲ್ವೆ ಸಚಿವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.