ಶನೈಶ್ಚರ ಸ್ವಾಮಿಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕರು. 
ಮಂಡ್ಯ

ಪುರುದೊಡ್ಡಿ ಶನೈಶ್ಚರಸ್ವಾಮಿ ಪೂಜಾ ಮಹೋತ್ಸವ

ಹಲಗೂರು: ಸಮೀಪದ ಪುರುದೊಡ್ಡಿ ಗ್ರಾಮದ ಮುಖ್ಯ ದ್ವಾರದಲ್ಲಿರುವ ಶ್ರೀ ಶನೈಶ್ಚರಸ್ವಾಮಿಯ 55ನೇ ವರ್ಷದ ಪೂಜಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶುಕ್ರವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ ಹಾಗೂ ಪೂರ್ಣಾಹುತಿ ನಂತರ ಶ್ರೀಶನೈಶ್ಚರಸ್ವಾಮಿ ಹಾಗೂ ಅಭಯ ಆಂಜನೇಯಸ್ವಾಮಿಗೆ ಅಭಿಷೇಕ ನಡೆಸಿ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಶನಿವಾರ ಬೆಳಗ್ಗೆ ಸಮೀಪದ ಶಿಂಷಾ ನದಿಯಿಂದ ಹೂವು ಹೊಂಬಾಳೆಯಿಂದ ಶೃಂಗಾರ ಮಾಡಿಕೊಂಡ ಶ್ರೀ ಮಹದೇಶ್ವರ ಕರಗ ಮತ್ತು ಗಂಗೆ ಹೊತ್ತ ಅರ್ಚಕರು ಹೊರಟಾಗ ಜತೆಯಲ್ಲಿ ಹರಕೆ ಹೊತ್ತುವರು, ಬಾಯಿ ಬೀಗದವರು, ಪೂರ್ಣಕುಂಭದೊಡನೆ ದೇವರ ಕುಣಿತ, ವೀರಗಾಸೆ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕಿ ದೇವರನ್ನು ಗರ್ಭಗುಡಿಗೆ ಕರೆದೊಯ್ಯಲಾಯಿತು. ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಹರಕೆ ಹೊತ್ತವರು ಎತ್ತಿನಗಾಡಿಯಲ್ಲಿ ಪಾನಕ ಮಜ್ಜಿಗೆಯನ್ನು ಭಕ್ತಾದಿಗಳಿಗೆ ವಿತರಿಸಿದರು. ಬಾಣಸಮುದ್ರ, ತೊರೆಕಾಡನಹಳ್ಳಿ, ದಡಮಹಳ್ಳಿ, ಕದಂಪುರ, ತಾಳೆ ಹಳ್ಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ದೇವರಿಗೆ ತಮ್ಮ ಭಕ್ತಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು.
ಶ್ರೀ ಶನೈಶ್ಚರ ಸೇವಾ ಟ್ರಸ್ಟಿನ ಕಾರ್ಯದರ್ಶಿ ಟಿ.ಪುಟ್ಟಸ್ವಾಮಿ ಮಾತನಾಡಿ, ಈ ದಿನದ ವಿಶೇಷವೆಂದರೆ ಹದಿಮೂರು ವರ್ಷಗಳಿಗೊಮ್ಮೆ ಬರುವ ಶನಿವಾರ ದಿನದ ಬಾದಾಮಿ ಅಮಾವಾಸ್ಯೆ ಈ ದಿನ ಶನೈಶ್ಚರ ಜಯಂತಿಯೂ ಆಗಿರುವುದು ನಮ್ಮೆಲ್ಲರ ಪುಣ್ಯ. ಈ ದಿನ ಬೆಳಗ್ಗೆ ಶಿಂಷಾ ನದಿ ತಟದಲ್ಲಿ ಪೂಜೆ ನಡೆಸಿ ಹೂ ಹೊಂಬಾಳೆಯೊಂದಿಗೆ ಗಂಗೆಯನ್ನು ತಂದು ದೇವರಿಗೆ ಅಭಿಷೇಕ ನಡೆಸಿ ಪುಷ್ಪಾಲಂಕಾರ,ನವಗ್ರಹ ಪೂಜೆ ನಡೆಸಿ ಮಹಾಮಂಗಳಾರತಿ ನಡೆಸಿದ ನಂತರ ಭಕ್ತರಿಗೆ ಅನ್ನದಾಸೋಹ ನಡೆಸಲಾಯಿತು ಎಂದರು.
ಪ್ರಧಾನ ಅರ್ಚಕರಾದ ಶೈಲೇಶ್ ಮತ್ತು ಶನೈಶ್ಚರ ಸ್ವಾಮಿಯ ಸೇವಾ ಟ್ರಸ್ಟಿನ ಅಧ್ಯಕ್ಷರೂ ಆದ ನಿವೃತ್ತ ಶಿಕ್ಷಕ ಡಿ ರಾಮು, ಉಪಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಟಿ. ಪುಟ್ಟಸ್ವಾಮಿ , ಖಜಾಂಚಿ ಜಯರಾಮು ಮತ್ತು ಪಿ.ನಾಗೇಶ, ಬಿ.ಸಿ.ದೇವರಾಜು, ಟಿ.ಎಚ್.ಶ್ರೀನಿವಾಸ್, ರಾಜು ಹಾಗೂ ಟ್ರಸ್ಟಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.