ಮಂಡ್ಯದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ನಗರದಲ್ಲಿ ಪೂರ್ವಭಾವಿ ಸಭೆ
- ಡಿಡಿಪಿಯು ಸೇರಿದಂತೆ ಹಲವು ಅಧಿಕಾರಿಗಳು ಭಾಗಿ
ಮಂಡ್ಯ: ಜಿಲ್ಲೆಯಲ್ಲಿ ಏ.30 ರಿಂದ ಮೇ 13ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ. ಆದ್ದರಿಂದ ಯಾವುದೇ ಲೋಪ ಉಂಟಾಗದಂತೆ ಪಾರದರ್ಶಕವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2,877 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ನಿಗದಿತ ದಿನದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಹಾಗೂ 13ರಂದು ಬೆಳಗ್ಗೆ 10 ಗಂಟೆಯಿಂದ 1ರವರೆಗೆ ಮತ್ತು ಮಧ್ಯಾಹ್ನ 2ಗಂಟೆಯಿಂದ 4.15ರವರೆಗೆ ಪರೀಕ್ಷೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಏಳು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ನಿಗದಿತ ದಿನ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳನ್ನು ಮುಚ್ಚಲಾಗುವುದು. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಯನ್ನು ಸಾಗಿಸುವಾಗ ಬಿಗಿ ಭದ್ರತೆಯನ್ನು ಒದಗಿಸಲಾಗುವುದು. ಇದಕ್ಕೆಂದು ಏಳು ಮಾರ್ಗದಲ್ಲಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು. ಪರೀಕ್ಷೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ಕಾಸ್ಟಿಂಗ್ ನಡೆಯಲಿದ್ದು, ಇದಕ್ಕಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಸಿ.ಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಕ್ಯಾಮೆರಾ ಅಳವಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಸಮಯದಲ್ಲಿ ಸಿ.ಸಿ ಕ್ಯಾಮೆರಾದಲ್ಲಿ ತಾಂತ್ರಿಕ ದೋಷ ಉಂಟಾಗುತ್ತದೆ ಕ್ರಮ ವಹಿಸಬೇಕು. ಜತೆಗೆ ಪರೀಕ್ಷೆ ನಡೆಯುವ ಸಮಯದಲ್ಲಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಹಾಗೂ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರದ ಜತೆಗೆ ಮೂಲ ಸೌಕರ್ಯ ಕಲ್ಪಿಸಿ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಗ್ರಾಮೀಣ ಭಾಗದಿಂದ ಮಕ್ಕಳು ಬರುವುದರಿಂದ ಬಸ್‌ಗಳು ಪರೀಕ್ಷಾ ದಿನದಂದು ವಿಳಂಬವಾಗದಂತೆ ಕ್ರಮ ವಹಿಸಿ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸ್ಮಾರ್ಟ್ ಡಿವೈಸ್‌ಗಳನ್ನು ಕೊಠಡಿಗೆ ತರಲು ಬಿಡಬೇಡಿ. ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿರುವ ಶಿಕ್ಷಕರು ಮಾರ್ಗಸೂಚಿಗೆ ಬದ್ಧರಾಗಿ ಕರ್ತವ್ಯ ಪಾಲಿಸಬೇಕು. ಅಂತೆಯೇ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಯಾರಿಗೂ ಅನುಮತಿ ನೀಡಬಾರದು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ನಗರಸಭೆ ಇಂಜಿನಿಯರ್ ರುದ್ರೇಗೌಡ, ಜಿಲ್ಲಾ ಖಜಾನೆ ಉಪನಿರ್ದೇಶಕಿ ವರಲಕ್ಷ್ಮೀ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಸೇರಿದಂತೆ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.