ಮಂಡ್ಯದ ಕುವೆಂಪುನಗರದ ಬಲಮುರಿ ಗಣಪತಿ ದೇವಸ್ಥಾನದ ಉದ್ಯಾನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು.
- ಕುವೆಂಪುನಗರದಲ್ಲಿ ಜನಸಂಪರ್ಕ ಸಭೆ
- ಸಾರ್ವಜನಿಕರ ಆಹವಾಲು ಆಲಿಕೆ
ಮಂಡ್ಯ: ನಗರದ 14 ಮತ್ತು 15ನೇ ವಾರ್ಡ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಇಲ್ಲಿನ ಕುವೆಂಪುನಗರದ ಬಲಮುರಿ ಗಣಪತಿ ದೇವಸ್ಥಾನದ ಉದ್ಯಾನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಈ ಎರಡು ವಾರ್ಡ್‌ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಿಂದಿನ ಜನಪ್ರತಿನಿಧಿಗಳು ಏಕೆ ಗಮನಹರಿಸಿಲ್ಲ ಎನ್ನುವುದು ಯಕ್ಷಪ್ರಶ್ನೆ. ನನ್ನ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಎರಡು ವಾರ್ಡ್‌ನಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಎರಡೂವರೆ ಕೋಟಿ ರೂ ಅನುದಾನ ನೀಡಲಾಗುವುದು. ಇದರಲ್ಲಿ ಶೀಘ್ರವೇ 80 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಈ ಎರಡು ವಾರ್ಡ್‌ನ ಪ್ರಮುಖ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಬಲಮುರಿ ಗಣಪತಿ ದೇವಸ್ಥಾನ ಹಿಂದಿರುವ ಯೋಗಶಾಲೆ ಹಾಗೂ ಗ್ರಂಥಾಲಯದ ಉನ್ನತೀಕರಣಕ್ಕೆ 5 ಲಕ್ಷ ರೂ ನೀಡಲಾಗುವುದು. ದೇವಸ್ಥಾನದ ಎದುರಿನ ರಸ್ತೆ ಅಭಿವೃದ್ಧಿಗೆ ಕೆಲ ದಿನದಲ್ಲೇ ಚಾಲನೆ ಸಿಗಲಿದೆ. ಉದ್ಯಾನದಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಆಟೋಟ ಸಾಮಗ್ರಿ ಅಳವಡಿಸಲು ಕ್ರಮ ವಹಿಸಲಾಗುವುದು ಎಂದರು.
ಪೌರಾಯುಕ್ತೆ ಪಂಪಶ್ರೀ, ಇಎಎ ಪುಟ್ಟಯ್ಯ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಸದಸ್ಯ ಕೃಷ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿಗೌಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಶಿವಣ್ಣಗೌಡ ಇತರರಿದ್ದರು. ಇದೇ ವೇಳೆ ಸಾರ್ವಜನಿಕರು ತಮ್ಮ ವಾರ್ಡ್‌ನಲ್ಲಿನ ರಸ್ತೆ, ಚರಂಡಿ, ವಿದ್ಯುತ್ ದೀಪದ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.