ಮಂಡ್ಯ ನಗರದ ಜೆ.ಸಿ.ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಜನಾಕ್ರೋಶ ಸಭೆ ಆಯೋಜಿಸಲಾಗಿತ್ತು. 
ಮಂಡ್ಯ

ಮಸೂದೆಗೆ ತಡೆಯೊಡ್ಡಿ ಕಾಂಗ್ರೆಸ್‌ನಿಂದ ಅವಮಾನ: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ನಗರದ ಜೆ.ಸಿ.ವೃತ್ತದಲ್ಲಿ ಜನಾಕ್ರೋಶ ಸಭೆ
  • ಬಿಜೆಪಿ ಮಹಿಳಾ ಮೋರ್ಚಾದಿಂದ ಆಯೋಜನೆ
ಮಂಡ್ಯ: ಲೋಕಸಭೆ ಕ್ಷೇತ್ರಗಳನ್ನು ಹೆಚ್ಚಳ ಮಾಡಿ ಮುಂದಿನ ಚುನಾವಣೆಯಲ್ಲಿ ಮಹಿಳೆಯರು ಸಂಸತ್‌ಗೆ ಹೋಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದರು. ಆದರೆ ಮಹಿಳಾ ಮೀಸಲಾತಿ ಮಸೂದೆಗೆ ತಡೆಯೊಡ್ಡಿದ ಕಾಂಗ್ರೆಸ್ ಅವಮಾನ ಮಾಡಿತು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ಆರೋಪಿಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆಯೋಜಿಸಿದ್ದ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಇಂದು ಎಲ್ಲ ಕ್ಷೇತ್ರಗಳಿಗೆ ಮಹಿಳೆಯರ ನಾಯಕತ್ವ ಬೇಕಾಗಿದೆ. ಆ ನಾಯಕತ್ವವನ್ನು ಹೋರಾಟದ ಮೂಲಕ ಪಡೆಯಬೇಕಾದ ಅವಶ್ಯಕತೆ ಇದೆ. ಈ ಅವಕಾಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಮೂಲಕ ನೀಡಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಮಸೂದೆಗೆ ಬೆಂಬಲ ನೀಡದೆ ಅವಮಾನ ಮಾಡಿತು ಎಂದು ದೂರಿದರು.
2029ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರು ಲೋಕಸಭೆಗೆ ಪ್ರವೇಶ ಮಾಡಬೇಕು ಎಂದು ಬಯಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಕಲ್ಲು ಹಾಕಿದೆ. ಇದು ಮಹಿಳಾ ವಿರೋಧಿ ಕಾಂಗ್ರೆಸ್. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಮಾತ್ರ ಸಂಸತ್ತಿನಲ್ಲಿ ಇರಬೇಕು. ಬೇರೆ ಮಹಿಳೆಯರು ಆಯ್ಕೆಯಾಗಬೇಕಾಗಿಲ್ಲ. ಅವರಿಗೆ ಜೈ ಎನ್ನಲು ಮಾತ್ರ ಮಹಿಳೆಯರು ಬೇಕು. ಮೀಸಲಾತಿ ಬೇಕು ಎಂಬುದು ಇಂದಿನ ಚರ್ಚೆ ಅಲ್ಲ. ಶೋಷಿತರಿಗೆ ಮೀಸಲಾತಿ ಬೇಕು ಎಂಬುದು ಬಂತು. ಮಹಿಳೆಯರಿಗೆ ರಾಜಕೀಯ ಮೀಸಲಾತಿ ಬೇಕು ಎಂದು ಐವತ್ತು ವರ್ಷದ ಹಿಂದೆಯೇ ಶಿಫಾರಸು ಆಗಿದೆ. ಆದರೆ ಅದನ್ನು ಜಾರಿ ಮಾಡುವ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದರು ಎಂದು ಹೇಳಿದರು.
ಹಿಂದೂ ಕೋಡ್ ಬಿಲ್ ಮಂಡನೆಯಾದಾಗಲೂ ಕಾಂಗ್ರೆಸ್ ಬೆಂಬಲ ನೀಡಿರಲಿಲ್ಲ. ಇದು ಕಾಂಗ್ರೆಸ್ ಇತಿಹಾಸದಲ್ಲಿ ಮಾಡಿರುವ ಅಪಚಾರ. ಅಂದಿನಿಂದ ಇಂದಿನವರೆಗೆ ಮಹಿಳೆಯರಿಗೆ ಅಪಚಾರವನ್ನು ಕಾಂಗ್ರೆಸ್ ಮಾಡುತ್ತಲೇ ಇದೆ. ಮುಸ್ಲಿಂ ಹೆಣ್ಣು ಮಕ್ಕಳನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿರುವ ಕಾಂಗ್ರೆಸ್ ತ್ರಿವಳಿ ತಲಾಖ್ ನಿಷೇಧಕ್ಕೂ ವಿರೋಧಿಸಿತ್ತು. ಅದನ್ನು ಲೆಕ್ಕಿಸದೆ ಮೋದಿ ಅವರು ಕಾನೂನು ಜಾರಿ ಮಾಡಿದರು. ಕೇವಲ ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಮಾತ್ರವಲ್ಲ, ಮುಸ್ಲಿಂ ಹೆಣ್ಣು ಮಕ್ಕಳಿಗೂ ಮೋದಿ ಅವರು ರಕ್ಷಣೆ ನೀಡಿದರು. ಇಂತಹ ಕಾಂಗ್ರೆಸ್‌ಗೆ ಪಾಠ ಕಲಿಸಬೇಕಾಗಿದೆ. ನಮ್ಮ ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಹೋರಾಟದ ಮೂಲಕ ಪಡೆದುಕೊಳ್ಳುತ್ತೇವೆ. ಮಹಿಳಾ ಮೀಸಲು ಮಸೂದೆಗೆ ಸೋಲಿನ ನಂತರ ಮಾತನಾಡಿದ ಮೋದಿ ಅವರು ದೇಶದ ಕ್ಷಮೆಯಾಚಿಸಿದರು. ಹೊಸ ಯುಗಕ್ಕೆ ನಾಂದಿ ಹಾಡಿದ ಪ್ರಧಾನಿ ಅವರಿಗೆ ಬೆಂಬಲ ಕೊಟ್ಟು ನಮ್ಮ ಸಂಸದರು ಟೊಂಕ ಕಟ್ಟಿ ನಿಂತಿದ್ದಾರೆ. ಮೋದಿ ಅವರು ನೀಡಿದ ಅವಕಾಶದ ವಿರುದ್ಧ ನಿಂತವರನ್ನು ಸೋಲಿಸಬೇಕು ಎಂದರು.
ಮಹಿಳಾ ಮೋರ್ಚಾದ ಪುಟ್ಟಮ್ಮ, ದೇವೀರಮ್ಮ, ಅನುರಾಧಾ, ಭಾಗ್ಯಾ, ವೀಣಾ, ಶಿಲ್ಪಾ, ಮಮತಾರಾಂಕ, ಲಲಿತಾ ಸಿದ್ದರಾಜು, ವಿವೇಕ್, ಯಮದೂರು ಸಿದ್ದರಾಜು, ಸಾರಂಗಿ ನಾಗಣ್ಣ, ಎಚ್.ಆರ್.ಅಶೋಕ್, ಸಿ.ಟಿ.ಮಂಜುನಾಥ್ ಇತರರಿದ್ದರು.