ಪಾಂಡವಪುರ ತಾಲೂಕು ವಿಶ್ವೇಶ್ವರಯ್ಯ ನಗರದ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ನಡೆಯಿತು. ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಲಕ್ಷ್ಮೀದೇಶಪಾಂಡೆ, ಜಾಕೀಯ ಬಾನು, ಅನುಷಾ, ಡಾ.ಕಿಶೋರ್ ಇದ್ದರು.
ಪಾಂಡವಪುರ: ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಮೂಲಕ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.
ತಾಲೂಕಿನ ವಿಶ್ವೇಶ್ವರಯ್ಯ ನಗರದ ಶ್ರೀರಾಮ ಮಂದಿರದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ ಮಹಿಳೆಯರು, ಮಕ್ಕಳಿಗೆ ಪೌಷ್ಟಿಕ ಆಹಾರ ಕುರಿತು ಅರಿವು ಮೂಡಿಸುತ್ತಿದೆ. ಹಿಂದೆ ಸಿಗುತ್ತಿದ್ದ ಪೋಷಕಾಂಶಯುಕ್ತ ಆಹಾರ ಈಗ ನಮಗೆ ದೊರೆಯುತ್ತಿಲ್ಲ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ ಎಂದು ಹೇಳಿದರು.
ಸಿಡಿಪಿಒ ಪೂರ್ಣಿಮಾ ಮಾತನಾಡಿ, ಆಹಾರ ಸೇವನೆಯಲ್ಲಿ ವೈವಿಧ್ಯತೆ ಇರಬೇಕು. ಸೊಪ್ಪು, ತರಕಾರಿ, ಮೊಳಕೆ ಕಾಳುಗಳನ್ನು ಸೇವನೆ ಮಾಡಬೇಕು. ಗರ್ಭಿಣಿಯರು, ಮಕ್ಕಳು, ಬಾಣಂತಿಯರ ಆರೋಗ್ಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಮನೆಯಂಗಳದಲ್ಲಿ ಕೈತೋಟ ನಿರ್ಮಿಸಿಕೊಂಡು ಅಲ್ಲಿಯೇ ಶುದ್ಧ ತರಕಾರಿ, ಹಣ್ಣು, ಸೊಪ್ಪು ಬೆಳೆದು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ರುಕ್ಮಿಣಿ ಮಾತನಾಡಿ, ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ ಶಾಸಕರು ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.
ಪೋಷಣ್ ತಾಲೂಕು ಸಂಯೋಜಕಿ ಅನುಷಾ, ವೃತ್ತ ಮೇಲ್ವಿಚಾರಕಿ ಲಕ್ಷ್ಮೀದೇಶಪಾಂಡೆ, ಮೇಲ್ವಿಚಾರಕಿ ಜಾಕೀಯ ಬಾನು, ಡಾ.ಕಿಶೋರ್, ಕ್ಯಾತನಹಳ್ಳಿ ಮತ್ತು ಟೌನ್ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಜರಿದ್ದರು.