ಶಾಸಕ ದರ್ಶನ್ ಪುಟ್ಟಣ್ಣಯ್ಯ  
ಮಂಡ್ಯ

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸವಲತ್ತು ಕಲ್ಪಿಸಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತಾಯ
  • ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ
ಪಾಂಡವಪುರ: ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸವಲತ್ತು ಕಲ್ಪಿಸುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಪ್ರಶ್ನೆ ಸಂಖ್ಯೆ 182ರಲ್ಲಿ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಪಡೆದ ಲಿಖಿತ ಉತ್ತರದ ಮೇಲೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ನಿಭಾಯಿಸುತ್ತಿರುವ ಜವಾಬ್ದಾರಿಗಳನ್ನು ವಿಸ್ತೃತವಾಗಿ ವಿವರಿಸುವ ಮೂಲಕ ಸರ್ಕಾರದ ಗಮನ ಸೆಳೆದರು.
ಆಶಾ ಕಾರ್ಯಕರ್ತೆಯರು ಐಸಿಡಿಎಸ್, ಎನ್‌ಎಚ್‌ಎಂ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಜತೆಗೆ ಜನರ ಆರೋಗ್ಯ ಸುಧಾರಣೆ ವಿಚಾರವಾಗಿ ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದರೂ ಇವರಿಗೆ ಉದ್ಯೋಗ ಮಾನ್ಯತೆ ಸಿಕ್ಕಿಲ್ಲ, ಸರಿಯಾದ ಸಮಯಕ್ಕೆ ಗೌರವ ಧನವು ಸಿಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಗೌರವ ಧನ ಹೆಚ್ಚಳ ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದರು.
ಸಚಿವೆ ಲಕ್ಷ್ಮೀ ಹೆಬಾಳ್ಕರ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲೇ ಅತಿ ಹೆಚ್ಚು ಗೌರವ ಧನ ನೀಡುವ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಕೇವಲ 2700 ಮಾತ್ರ ಪಾವತಿಸುತ್ತಿದೆ. ರಾಜ್ಯ ಸರ್ಕಾರ ಹೆಚ್ಚಿನ ಹಣ ಒದಗಿಸುತ್ತಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾವಿರ ರೂ. ಹಾಗೂ ಸಹಾಯಕಿಯರಿಗೆ 750 ರೂ. ಗೌರವ ಧನ ಹೆಚ್ಚಳ ಮಾಡಿ ಬಜೆಟ್‌ನಲ್ಲೇ ಘೋಷಣೆ ಮಾಡಿತ್ತು. ಅದನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಚರ್ಚೆ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಪ್ರಭು ಚೌಹಾಣ್, ನಿಮ್ಮ ಸರ್ಕಾರ ಅತಿ ಹೆಚ್ಚು ಗೌರವ ಧನ ನೀಡುತ್ತಿರುವುದಾಗಿ ಹೇಳಿದ್ದೀರಿ, ಆದರೆ ಕಾರ್ಯಕರ್ತೆಯರು ಎಲ್ಲ ಶಾಸಕರ ಬಳಿ ತೆರಳಿ ಇದೇ ವಿಚಾರವಾಗಿ ಮನವಿ ಸಲ್ಲಿಸಿದ್ದಾರೆ. ಅದಕ್ಕಾಗಿ ಅವರ ಮನವಿಯನ್ನು ಪರಿಗಣಿಸಿ ಸರ್ಕಾರ ಗೌರವ ಧನ ಹೆಚ್ಚಳ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಎಲ್ಲವನ್ನೂ ರಾಜ್ಯ ಸರ್ಕಾರವೇ ಭರಿಸಲಿ ಎನ್ನುವುದು ಸರಿಯಲ್ಲ. ನಾವೇ ಎಷ್ಟು ಅಂತಾ ಖರ್ಚು ಮಾಡುವುದು? ಎಲ್ಲದಕ್ಕೂ ನಾವೇ ಖರ್ಚು ಮಾಡುತ್ತಿದ್ದೇವೆ. ರಾಷ್ಟ್ರೀಯ ಜಲ ಜೀವನ್ ಮಿಷನ್, 15ನೇ ಹಣಕಾಸು ಯೋಜನೆ ಹೀಗೆ ಎಲ್ಲದರಲ್ಲೂ ರಾಜ್ಯ ಸರ್ಕಾರದ್ದೇ ಬಹುಪಾಲು ಇದೆ. 50:50 ಅಥವಾ 40:60 ಅನುಪಾತದಲ್ಲಿ ಹಣ ಹಂಚಿಕೆಯಾದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದು ವಾದಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಪ್ರಭು ಚೌಹಾಣ್ ನಿಮ್ಮ ಫೋಟೋ ಹಾಕಿಕೊಳ್ಳಿ ಎಂದು ಛೇಡಿಸಿದ್ದಾಗ ಸ್ಪೀಕರ್ ಯು.ಟಿ.ಖಾದರ್ ಚರ್ಚೆಗೆ ಬ್ರೇಕ್ ಹಾಕಿದರು.