ಮಳವಳ್ಳಿ ತಾಲೂಕಿನ ಶಿವನಸಮುದ್ರ ಕೆಪಿಸಿ ಕಚೇರಿ ಮುಂದೆ ಸೋಮವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಭರತ್ ರಾಜ್, ಗುರುಸ್ವಾಮಿ, ಎನ್.ಲಿಂಗರಾಜಮೂರ್ತಿ, ಮಹದೇವಮ್ಮ ವಿಷಕಂಠು, ನಂಜುಂಡಸ್ವಾಮಿ, ನಾಗಮ್ಮ, ವಿಮಲಾ, ಮಹಾದೇವಯ್ಯ, ರಾಜಮ್ಮ , ಮಾದೇಶ, ಜಯಮ್ಮ ಇದ್ದರು. 
ಮಂಡ್ಯ

ಶಿವಸಮುದ್ರದ ಕೆಪಿಸಿ ಕಚೇರಿ ಮುಂಭಾಗ ಪ್ರತಿಭಟನೆ

ಮಳವಳ್ಳಿ: ತಾಲೂಕಿನ ಶಿವಸಮುದ್ರಂ (ಬ್ಲಫ್) ಬಳಿ ಇರುವ ಕರ್ನಾಟಕ ವಿದ್ಯುತ್ ನಿಗಮದ ಅಡಿ ಹೊರಗುತ್ತಿಗೆ ಪಡೆದು ಉಪಕರಣಗಳ ನವೀಕರಣ ಕಾಮಗಾರಿ ನಡೆಸುವ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ವೇಳೆ ಅವಘಡದಲ್ಲಿ ಪೆಟ್ಟಾಗಿದ್ದ ಕಾರ್ಮಿಕನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸೋಮವಾರ ಪ್ರಾಂತ ರೈತ ಸಂಘ ಹಾಗೂ ಸಿಐಟಿಯುವ ಸಂಘಟನೆಗಳು ಸಂತ್ರಸ್ತ ಕುಟುಂಬದೊಂದಿಗೆ ಶಿವಸಮುದ್ರದ ಕೆಪಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದವು.
ಸಂಘಟನೆ ಮುಖಂಡ ಭರತ್ ರಾಜ್ ಮಾತನಾಡಿ, ಗುತ್ತಿಗೆ ಪಡೆದ ಸಂಸ್ಥೆಯವರ ಬಳಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಅಭಿಷೇಕ್‌ಗೆ ಮೂರು ತಿಂಗಳ ಹಿಂದೆ ಕೆಲಸದ ಸಮಯದಲ್ಲಿ ಕೈ ಮೂಳೆ ಮುರಿದಿದ್ದು, ಆತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಗುತ್ತಿಗೆ ಪಡೆದ ಸಂಸ್ಥೆ ಸುಮ್ಮನಾಗಿದೆ. ಮುಂದುವರಿದ ಚಿಕಿತ್ಸೆಗೆ ಯಾವುದೇ ಸಹಕಾರ ಅಥವಾ ಪರಿಹಾರ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಸಿಐಟಿಯು ಮುಖಂಡ ವಿಷಕಂಠ ಮಾತನಾಡಿ, ಏಷ್ಯಾದಲ್ಲಿಯೇ ಪ್ರಥಮ ಜಲ ವಿದ್ಯುತ್ ಕೇಂದ್ರ ಇದಾಗಿದ್ದು, ಹಲವಾರು ಖಾಸಗಿ ಕಂಪನಿಗಳು ಜಲ ವಿದ್ಯುತ್ ಉತ್ಪಾದನೆ ಸೇರಿದಂತೆ ಇನ್ನಿತರ ಉತ್ಪಾದನಾ ಘಟಕಗಳಿವೆ. ಇಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿದರು.
ಕೆಲಸದ ಸ್ಥಳದಲ್ಲಿ ಅವಘಡಗಳು ಸಂಭವಿಸಿದಾಗ ಅಗತ್ಯ ಚಿಕಿತ್ಸೆ ಕೊಡಿಸುವುದಿಲ್ಲ. ಕುಟುಂಬ ನಿರ್ವಹಣೆಗೆ ಕನಿಷ್ಠ ಸೌಲಭ್ಯ ಒದಗಿಸುತ್ತಿಲ್ಲ. ಕಾರ್ಮಿಕರ ಶ್ರಮವನ್ನು ಖಾಸಗಿ ಕಂಪನಿಗಳು ಶೋಷಣೆ ಮಾಡುತ್ತಿವೆ. ಗಾಯಗೊಂಡಿರುವ ಕಾರ್ಮಿಕನಿಗೆ ಅಗತ್ಯ ಚಿಕಿತ್ಸಾ ವೆಚ್ಚ, ಪರಿಹಾರ ಹಾಗೂ ದೈಹಿಕವಾಗಿ ಸಮರ್ಥನಾಗುವವರೆಗೂ ವೇತನ ನೀಡಬೇಕು. ಇಲ್ಲವಾದಲ್ಲಿ ಇಲ್ಲಿರುವ ಖಾಸಗಿ ಕಂಪನಿಗಳ ಶೋಷಣೆ ವಿರುದ್ಧ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿ ಸ್ಥಳಕ್ಕೆ ಕಾರ್ಮಿಕ ಇಲಾಖೆಯ ಲೇಬರ್ ಇನ್‌ಸ್ಪೆಕ್ಟರ್ ಮುನಿಲಿಂಗೇಗೌಡ, ಕೆಪಿಸಿಯ ಕಾರ್ಯಪಾಲಕ ಅಭಿಯಂತರ ಅನಿತಾ ಆಗಮಿಸಿ ಪ್ರತಿಭಟನಾನಿರತರ ಜತೆ ಚರ್ಚಿಸಿದರು. ನಂತರ ಗುತ್ತಿಗೆ ಪಡೆದ ಕಂಪನಿ ಮುಖ್ಯಸ್ಥರೊಂದಿಗೆ ಮಾತನಾಡಿ, ಸಂತ್ರಸ್ತ ಕಾರ್ಮಿಕನಿಗೆ ವಿಶ್ರಾಂತಿ ದಿನಗಳ 3 ತಿಂಗಳ ವೇತನ, ಮುಂದುವರಿದ ಚಿಕಿತ್ಸಾ ವೆಚ್ಚ ಹಾಗೂ ಕಾರ್ಮಿಕನ ಸಾಮರ್ಥ್ಯಕ್ಕೆ ಅನುಗುಣವಾಗು ಉದ್ಯೋಗ ನೀಡುವ ಒಪ್ಪಿಗೆ ಪಡೆದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈ ಬಿಡಲಾಯಿತು.
ಸಂಘಟನೆಯ ಗುರುಸ್ವಾಮಿ, ಎನ್.ಲಿಂಗರಾಜಮೂರ್ತಿ, ಮಹದೇವಮ್ಮ ವಿಷಕಂಠು, ನಂಜುಂಡಸ್ವಾಮಿ, ನಾಗಮ್ಮ, ವಿಮಲಾ, ಮಹಾದೇವಯ್ಯ, ರಾಜಮ್ಮ, ಮಾದೇಶ, ಜಯಮ್ಮ, ನಾಗಮ್ಮ, ಮೇರಿಯಮ್ಮ ಸೇರಿದಂತೆ ಹಲವರಿದ್ದರು.