ಮಂಡ್ಯ ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
- ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
- ಕರ್ನಾಟಕ ಅಪಾಯದ ಹೊಸ್ತಿಲಲ್ಲಿ ನಿಂತಿದೆ ಎಂದು ಆರೋಪ
ಮಂಡ್ಯ: ಕೇಂದ್ರ ಸರ್ಕಾರದ ಎಸ್‌ಐಆರ್ ಜಾರಿ ಮಾಡುವ ಮೂಲಕ ಪ್ರಜಾತಂತ್ರದ ಅಡಿಪಾಯವನ್ನು ಬುಡಮೇಲು ಮಾಡುತ್ತಿರುವ ಜತೆಗೆ ಸಂವಿಧಾನದ ನಿರ್ದೇಶನಕ್ಕೆ ವಿರುದ್ಧ ದಿಕ್ಕಿನಲ್ಲಿ ದೇಶವನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ನೇತೃತ್ವದಲ್ಲಿ ಸರ್ ಎಂ.ವಿ. ಪ್ರತಿಮೆ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಐಆರ್‌ನ ಮೂರನೇ ಸುತ್ತಿನ ದಾಳಿ ಪ್ರಾರಂಭವಾಗುತ್ತಿದ್ದು, ಕರ್ನಾಟಕ ಅಪಾಯದ ಹೊಸ್ತಿಲಲ್ಲಿ ನಿಂತಿದೆ. ಆದರೆ, ಕರ್ನಾಟಕ ಈ ದುಷ್ಟ ಯೋಜನೆಯನ್ನು ತಿರಸ್ಕರಿಸಲು ತೀರ್ಮಾನಿಸಿದ್ದು, ತಾತ್ವಿಕವಾಗಿ ವಿರೋಧಿಸಿದರೆ ಸಾಲದು. ಬದಲಿಗೆ ಅದಕ್ಕಾಗಿ ಅಗತ್ಯವಿರುವ ಪರಿಣಾಮಕಾರಿ ಕ್ರಮಗಳಿಗೆ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಸಧ್ಯದ ಸ್ವರೂಪದ ಎಸ್‌ಐಆರ್‌ನ್ನು ಒಪ್ಪುವುದಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಿಸಬೇಕು. ತೀವ್ರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಅತ್ಯಗತ್ಯ ಐದು ಮೂಲ ಬದಲಾವಣೆಗಳನ್ನು ಮಾಡದಿದ್ದರೆ ಕರ್ನಾಟಕ ಸರ್ಕಾರ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಚುನಾವಣಾ ಆಯೋಗಕ್ಕೆ ತಿಳಿಸಬೇಕು. ಲಾಜಿಕಲ್ ಡಿಸ್ಕ್ರಿಪೆನ್ಸಿ ಎನ್ನುವ ಅತ್ಯಂತ ಅವೈಜ್ಞಾನಿಕ, ಅವಾಸ್ತವಿಕ, ಅಪಾರದರ್ಶಕ ಹಾಗೂ ದುರುದ್ದೇಶಪೂರಿತ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಸ್ಪೆಲ್ಲಿಂಗ್, ದಿನಾಂಕ ಇಂತಹ ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಮತದಾನದ ಹಕ್ಕಿನಿಂದ ಯಾರನ್ನೇ ಹೊರಗಿಡುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.
ಸಿ.ಡಿ.ಗಂಗಾಧರ ಮಾತನಾಡಿ, ಕೇಂದ್ರ ಸರ್ಕಾರ ನಿತ್ಯ ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಅಡುಗೆ ಅನಿಲ, ರಸಗೊಬ್ಬರ ದರ ಏರಿಕೆ ಮಾಡುವ ಮೂಲಕ ದೇಶದ ಮಧ್ಯಮ ವರ್ಗ ಮತ್ತು ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 8 ಅಂಶಗಳ ಕಾರ್ಯಕ್ರಮವನ್ನು ದೇಶಕ್ಕೆ ಏರಿಬಿಟ್ಟು, ತಾವೇ ಧೂಳಿಪಟ ಮಾಡಿ ಇಟಲಿ ಪ್ರವಾಸ ಮುಂದುವರಿಸುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಣ ಮಾಡಲು ಅಸಮರ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಇಂಧನ ದರ ಇಳಿಸಬೇಕು ಎಂದು ಆಗ್ರಹಿಸಿದರು.
ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದನ್ನು ಖಂಡಿತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ರಾಹುಲ್ ಗಾಂಧಿ ಅವರು ಮುಂದಿನ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಪತನ ಆಗುತ್ತದೆ ಎಂದು ತಿಳಿಸಿದ್ದಾರೆ. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಬೆಂಬಲ ವಾಪಸ್ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯ್ಯುವುದೇ ಕಾಂಗ್ರೆಸ್ ಗುರಿ. ಅದಕ್ಕೆ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟದ ಮೂಲಕ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಕೊಡುವುದು ಹಾಗೂ ಜನಸಾಮಾನ್ಯರ ಜತೆ ನಿಲ್ಲುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮುಖಂಡರಾದ ದೇಶಹಳ್ಳಿ ಮೋಹನ್‌ಕುಮಾರ್, ಸಿ.ಎಂ.ದ್ಯಾವಪ್ಪ, ಸುಜಾತಾಮಣಿ, ದೀಪಕ್, ವಿಜಯಕುಮಾರ್ ಚಂದಗಾಲು, ಅಭಿ, ರಾಮಕೃಷ್ಣ, ಉದಯ್ ಕುಮಾರ್, ಮಹೇಶ್, ಉಮ್ಮಡಹಳ್ಳಿ ನಾಗರಾಜು ಇತರರಿದ್ದರು.