ಪ್ರತಿಭಟನಾಕಾರರ ಮೇಲೆ ದೌರ್ಜನ್ಯವೆಸಗಿದ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗೊರವನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಿವರಾಮು, ರವಿ, ಪ್ರಸನ್ನ, ಕೃಷ್ಣೇಗೌಡ, ಕಾಳೇಗೌಡ ಇದ್ದರು.
ಮದ್ದೂರು: ತಾಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಕಡತಗಳನ್ನು ಕೊಂಡೋಯ್ಯಲು ಬಂದ ಅಧಿಕಾರಿಗಳು, ಪ್ರತಿಭಟಕಾರರ ಮೇಲೆ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಗ್ರಾಮದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಯಜಮಾನ ರವಿ ಮಾತನಾಡಿ, ಮದ್ದೂರು ನಗರಸಭೆಗೆ ಗೊರವನಹಳ್ಳಿ ಪಂಚಾಯಿತಿಯನ್ನು ಸೇರಿಸಿರುವುದನ್ನು ವಿರೋಧಿಸಿ 68 ದಿನಗಳಿಂದ ಶಾಂತಿಯುತ ಧರಣಿ ನಡೆಸಲಾಗುತ್ತಿತ್ತು. ಶನಿವಾರ ಸರ್ಕಾರಿ ಕಚೇರಿಗಳಿಗೆ ರಜಾ ದಿನವಾಗಿದ್ದರೂ, ಅಧಿಕಾರಿಗಳು ಗ್ರಾಪಂ ಕಚೇರಿಯಿಂದ ಕಡತಗಳನ್ನು ಕೊಂಡೋಯ್ಯಲು ಬಂದಾಗ ಅದಕ್ಕೆ ನಾವು ಅವಕಾಶ ನೀಡಲಿಲ್ಲ. ಈ ವೇಳೆ ದೌರ್ಜನ್ಯ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಘಟನೆಯಿಂದ ಗ್ರಾಮದ ನಾಲ್ವರು ಮಹಿಳೆಯರು ಗಾಯಗೊಂಡರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆಗೆ ಕಾರಣರಾದ ಪಿಡಿಒ, ತಾಪಂ ಇಒ ಸೇರಿದಂತೆ ಸಂಬಂಧಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಪೊಲೀಸರು ಪ್ರತಿಭಟನಾನಿರತ ಮಹಿಳೆಯರು, ಪುರುಷರು ಎಂಬುದನ್ನು ನೋಡದೆ ಪ್ರಾಣಿಗಳ ರೀತಿಯಲ್ಲಿ ಎಳೆದಾಡಿದ್ದಾರೆ. ಸದ್ಯದಲ್ಲೇ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಶಾಸಕ ಕೆ.ಎಂ.ಉದಯ್ ಅವರನ್ನು ಭೇಟಿ ಮಾಡಿ ಗ್ರಾಮದ ಮುಖಂಡರು ಚರ್ಚಿಸುತ್ತೇವೆ. ಆ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ. ರೈತ ಮಹಿಳೆಯರ ಮೇಲೆ ಪೊಲೀಸರು ಮಾಡಿರುವ ದೌರ್ಜನ್ಯ ಖಂಡಿಸಿ ಮಂಗಳವಾರ ನಗರದ ಐಬಿ ವೃತ್ತದಲ್ಲಿ ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಗ್ರಾಮದ ಯಜಮಾನರಾದ ಶಿವರಾಮು, ರವಿ, ಪುಟ್ಟಸ್ವಾಮಿ, ಕೃಷ್ಣೇಗೌಡ, ಲಿಂಗಯ್ಯ, ಸಿದ್ದರಾಜು, ಕಾಳೇಗೌಡ, ಬೋರೇಗೌಡ, ಮುಖಂಡರಾದ ಮಹೇಶ್, ಪ್ರಸನ್ನ, ಶಿವಪ್ಪ, ಸುರೇಶ್, ಗೌರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್, ಗ್ರಾಮಸ್ಥರು ಹಾಜರಿದ್ದರು.