ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಲಗೈ ಜಾತಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
- ಕಾಂಗ್ರೆಸ್ ಪಕ್ಷವನ್ನು ಅತಿ ಹೆಚ್ಚಾಗಿ ಬಲಗೈ ಸಮುದಾಯ ಬೆಂಬಲಿಸುತ್ತಿದೆ.
- ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆಂದು ಎಚ್ದರಿಕೆ
ಮಂಡ್ಯ: ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗುವ ನೂತನ ಸರ್ಕಾರದಲ್ಲಿ ಬಲಗೈ ಸಮುದಾಯಕ್ಕೆ ಡಿಸಿಎಂ ಹಾಗೂ ಐದು ಸಚಿವ ಸ್ಥಾನಗಳನ್ನು ನೀಡುವಂತೆ ಆಗ್ರಹಿಸಿ ಬಲಗೈ ಜಾತಿಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಮುಖಂಡರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವನ್ನು ಅತಿ ಹೆಚ್ಚಾಗಿ ಬಲಗೈ ಸಮುದಾಯ ಬೆಂಬಲಿಸುತ್ತಿದೆ. ದಲಿತ ಸಿಎಂ ಕೊಡುತ್ತೇವೆಂದು ಹೇಳಿ ಈಗ ಮಾತು ತಪ್ಪಿದೆ. ಆದ್ದರಿಂದ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ 5 ರಿಂದ 7 ಸಚಿವ ಸ್ಥಾನಗಳನ್ನು ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ನಮ್ಮ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಕೃಷ್ಣ, ಬಸವರಾಜ್, ಶ್ರೀಧರ್, ಪ್ರೇಮ್ ಕುಮಾರ್, ಕಬ್ಬಾಳಯ್ಯ, ಪ್ರೊ.ಚಂದ್ರಶೇಖರ್, ದೀಪಕ್, ಲವ, ಕಣಿವೆ ರಾಮು, ಹೊಂಬಯ್ಯ, ಸಿದ್ದರಾಜು, ಗುರುಮೂರ್ತಿ, ಶಿವಪ್ರಕಾಶ್, ಪ್ರಾಣೇಶ್, ಪ್ರಕಾಶ್ ಇತರರಿದ್ದರು.