ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಡ್ಯ ಡಿಸಿ ಕಚೇರಿ ಎದುರು ಎಂಬಿಕೆ ಹಾಗೂ ಎಲ್‌ಸಿಆರ್‌ಪಿ ಸಖಿಯರ ಮಹಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
- ಎಂಬಿಕೆಯನ್ನು ಮರುನೇಮಕ ಮಾಡುವಂತೆ ಆಗ್ರಹ
- ಅನುದಾನ ದುರ್ಬಳಕೆ ಮಾಡಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯ
ಮಂಡ್ಯ: ಎನ್‌ಆರ್‌ಎಲ್‌ಎಂ ಯೋಜನೆಯ ಅರಕರೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಪುಸ್ತಕ ಬರಹಗಾರ(ಎಂಬಿಕೆ) ರನ್ನು ಕೋರಂ ಇಲ್ಲದೆಯೂ ಸೇವೆಯಿಂದ ತೆಗೆದುಹಾಕಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಂಬಿಕೆ ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ(ಎಲ್‌ಸಿಆರ್‌ಪಿ) ಸಖಿಯರ ಮಹಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಎಂಬಿಕೆಯನ್ನು ಮರುನೇಮಕ ಮಾಡಬೇಕು. ಪಶುಸಖಿ, ಕೃಷಿಸಖಿಯರು ತಿಂಗಳ ಪೂರ್ತಿ ದುಡಿಯುತ್ತಿರುವುದರಿಂದ ಮಾಸಿಕ 9 ಸಾವಿರ ರೂ ಗೌರವಧನ ನೀಡಬೇಕು. ಒಕ್ಕೂಟದಿಂದ ಸಾಲ ಪಡೆದ ಸಂಘಗಳ ಹೆಚ್ಚುವರಿ ಬಡ್ಡಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಎನ್‌ಆರ್‌ಎಲ್‌ಎಂ ವಿಭಾಗಕ್ಕೆ ಬಂದಿರುವ ದೂರುಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಿಸಬೇಕು. ಬಾಕಿ ಉಳಿಸಿಕೊಂಡಿರುವ ಎಸ್‌ಸಿ ಮತ್ತು ಎಸ್ಟಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಬಿಆರ್‌ಪಿಇಪಿಗಳನ್ನು ತಾಪಂ ಸಿಬ್ಬಂದಿಯೆಂದು ಪರಿಗಣಿಸಿ ನೇರ ಗೌರವಧನ ನೀಡಬೇಕು. ಸರ್ಕಾರದ ಹಲವಾರು ಆದೇಶವನ್ನು ಉಲ್ಲಂಘಿಸಿ ಅನುದಾನ ದುರ್ಬಳಕೆ ಮಾಡಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಒಕ್ಕೂಟದ ಸಿಬ್ಬಂದಿಗೆ ರಕ್ಷಣೆ ಜತೆಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಜಿಪಂ ಮತ್ತು ತಾಪಂ ಹುದ್ದೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಜಿಪಿಎಲ್‌ಎಫ್ ಮಹಿಳಾ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ, ಜಿಲ್ಲಾಧ್ಯಕ್ಷೆ ನಿವಿತಾ, ಬಿಆರ್‌ಪಿಇಪಿ ರಾಜ್ಯಾಧ್ಯಕ್ಷೆ ಕೆ.ಜೆ.ಶಶಿಕಲಾ ಇತರರಿದ್ದರು.